ಕಡಬ: ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಪಾಲ್ತಾಡು ಗ್ರಾಮದ ಜಗದೀಶ (28) ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರುದಾರರು ನೀಡಿದ ದೂರಿನಂತೆ, ಜ.16ರಂದು ರಾತ್ರಿ 10 ರಿಂದ 10.30 ಗಂಟೆಗಳ ನಡುವೆ ಘಟನೆ ಸಂಭವಿಸಿದ್ದು, ಆರೋಪಿಗಳು ಜಾತಿ ಸೂಚಕ ಪದಗಳನ್ನು ಬಳಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಡಬ ಗ್ರಾಮದ ಸುರಭಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಸಮೀಪ ನಿಂತಿದ್ದಾಗ, ಪರಿಚಯಸ್ತರಾದ ಅಜಯ್, ಬೇಬಿ ಮತ್ತು ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿ ಜಾತಿ ನಿಂದನೆ ಮಾಡುತ್ತಾ ಕೈಯಿಂದ ಕೆನ್ನೆ,ತಲೆ,ಭುಜ,ಬೆನ್ನಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್‌ಗಳು 115(2), 352, 351(3) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಅತ್ಯಾಚಾರ ತಡೆ) ತಿದ್ದುಪಡಿ ಕಾಯ್ದೆ 2015ರ ಸೆಕ್ಷನ್‌ಗಳು 3(1)(r), 3(1)(s) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆ ಪರಿಶೀಲಿಸಿದ ನ್ಯಾಯಾಲಯ, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಆದೇಶಿಸಿದೆ. ಮುಂದಿನ ತನಿಖೆಯನ್ನು ಕಡಬ ಪೊಲೀಸ್ ಠಾಣೆ ಮುಂದುವರಿಸಿದೆ.

Leave a Reply

Your email address will not be published. Required fields are marked *