ಪುತ್ತೂರು: ಕೋಟಿ ಚೆನ್ನಯರು ಸತ್ಯ ಹಾಗೂ ಧರ್ಮಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವೀರರು. ತುಳುನಾಡಿನ ಮಣ್ಣಿನಲ್ಲಿ ಧರ್ಮ ದೇವತೆಗಳಾಗಿ ಶಾಶ್ವತವಾಗಿ ನೆಲೆಸಿರುವ ಇವರ ಆರಾಧನೆಯ ಜತೆಗೆ ಅವರು ಸಾರಿದ ಸಾಮಾಜಿಕ ನ್ಯಾಯವನ್ನು ಜೀವನದಲ್ಲಿ ಅನುಷ್ಠಾನಗೊಳಿಸುವುದು ಅಗತ್ಯ ಎಂದು ಮೂಡುಬಿದ್ರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ, ಪಡುಮಲೆ ಶ್ರೀ ನಾಗ ಬೆರ್ಮರ್ ಹಾಗೂ ಮಹಾಮಾತೆ ದೇಯಿ ಬೈದ್ಯೆತಿ ಸಾನಿಧ್ಯದಲ್ಲಿ ನಡೆದ ದೀಪೋತ್ಸವದ ಅಂಗವಾಗಿ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಕೋಟಿ ಚೆನ್ನಯರ ಮೂಲ ಉದ್ದೇಶ ಒಂದೇ ಆಗಿದ್ದು, ಗುರುಗಳು ಸನ್ಯಾಸತ್ವದ ಶಕ್ತಿಯಿಂದ ಸಾಮಾಜಿಕ ಸಮಾನತೆ ಸಾಧಿಸಿದರೆ, ಕೋಟಿ ಚೆನ್ನಯರು ಕ್ಷಾತ್ರ ತೇಜಸ್ಸಿನ ಮೂಲಕ ಅದನ್ನು ಅನುಷ್ಠಾನಗೊಳಿಸಿದರು ಎಂದು ಶ್ರೀಗಳು ನುಡಿದರು. ರಾಮಾಯಣ–ಮಹಾಭಾರತದ ಧರ್ಮ–ಅಧರ್ಮದ ಸಂಘರ್ಷದಂತೆ ತುಳುನಾಡಿನಲ್ಲಿ ಧರ್ಮದ ವಿಜಯವನ್ನು ಕೋಟಿ ಚೆನ್ನಯರು ಸಾರಿದರು ಎಂದರು.

ಪುರಾಣಕಾಲದ ಧನ್ವಂತರಿಯಂತೆ ತುಳುವ ಇತಿಹಾಸದಲ್ಲಿ ದೇಯಿ ಬೈದ್ಯೆತಿ ಔಷಧ ವಿದ್ಯೆಯ ಅಧಿದೇವತೆಯಾಗಿದ್ದು, ಇಂದಿಗೂ ಸಂಜೀವಿನಿ ಶಕ್ತಿಯ ಸಂಕೇತವಾಗಿ ಜಾತಿ–ಮತ ಭೇದಗಳ ಮೀರಿ ಆರಾಧಿಸಲ್ಪಡುತ್ತಿದ್ದಾರೆ ಎಂದು ಹೇಳಿದರು. ಪೆರುಮಳ ಬಲ್ಲಾಳರ ನಾಯಕತ್ವ, ಕೋಟಿ ಚೆನ್ನಯರ ಧರ್ಮಬೀರುತ್ವ ಹಾಗೂ ದೇಯಿ ಬೈದ್ಯೆತಿಯ ಶಕ್ತಿಯಿಂದ ಪಡುಮಲೆ ಶ್ರೇಷ್ಠ ಕ್ಷೇತ್ರವಾಗಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತ ಕೇವಲ ಮಣ್ಣಿನ ದೇಶವಲ್ಲ; ಇಲ್ಲಿ ಮಣ್ಣಿನ ಪ್ರತಿಯೊಂದು ಕಣದಲ್ಲೂ ಶಕ್ತಿ ಅಡಗಿದೆ. ಕೋಟಿ ಚೆನ್ನಯರಿಗೆ ಜನ್ಮ ನೀಡಿದ ಪಡುಮಲೆಯ ಮಣ್ಣು ಅತ್ಯಂತ ಪವಿತ್ರವಾಗಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಡುಮಲೆ ಭವಿಷ್ಯದಲ್ಲಿ ತಿರುಮಲೆ–ಶಬರಿಮಲೆಯಷ್ಟೇ ಪ್ರಸಿದ್ಧ ಕ್ಷೇತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸತ್ಯ ಯಾವತ್ತೂ ಸೋಲುವುದಿಲ್ಲ; ಧರ್ಮ–ಅಧರ್ಮ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದರು.
ಸಭೆಗೆ ಮೊದಲು ನಾಗ ಬೆರ್ಮರ್–ದೇಯಿ ಬೈದ್ಯೆತಿ ಸಾನಿಧ್ಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತರು ಕ್ಷೇತ್ರದಾದ್ಯಂತ ದೀಪ ಬೆಳಗಿ ದೀಪೋತ್ಸವ ಆಚರಿಸಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಗೋಪಾಲಕೃಷ್ಣ ತಂತ್ರಿ ಮಡಂತ್ಯಾರ್, ಜಯ ವಿಕ್ರಮ ರಾಮಕುಂಜ, ತ್ರಿವೇಣಿ ಪೆರುವೋಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಬೆಳ್ತಂಗಡಿಯ ಭಗೀರಥ ಜಿ. ವಂದಿಸಿದರು.

Leave a Reply

Your email address will not be published. Required fields are marked *