ಧರ್ಮ ಮತ್ತು ಸಂಸ್ಕೃತಿಗಳು ನಮ್ಮ ವೈಯಕ್ತಿಕ ಗುರುತಾಗಿದ್ದರೂ, ರಾಷ್ಟ್ರಭಕ್ತಿ ನಮ್ಮ ಸಾಮೂಹಿಕ ಗುರುತಾಗಬೇಕು. ಸಂವಿಧಾನ ಕೇವಲ ಕಾನೂನಿನ ಪುಸ್ತಕವಲ್ಲ; ಅದು ಸಮಾನತೆ, ಸ್ವಾತಂತ್ರ್ಯ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ ಹಾಗೂ ಸಹಬಾಳ್ವೆಯನ್ನು ಬಿಂಬಿಸುವ ಮಹತ್ವದ ಗ್ರಂಥವಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.

ಅವರು ಸೋಮವಾರ ಪುತ್ತೂರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸಲ್ಲಿಸಿ, ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ನಾಡಿಗೆ ಸಂದೇಶ ನೀಡಿದರು.
ದೇಶದ ಸಂವಿಧಾನಾತ್ಮಕ ಮೌಲ್ಯಗಳು, ಪ್ರಜಾಪ್ರಭುತ್ವದ ಶಕ್ತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಸ್ಮರಿಸುವ ದಿನವೇ ಗಣರಾಜ್ಯೋತ್ಸವ. ಡಾ. ಬಿ.ಆರ್. ಅಂಬೇಡ್ಕರ್ ಕಲ್ಪಿಸಿದ ಸಮಾಜವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವದ ಮೇಲೆ ನಿಂತಿದೆ. ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಗೌರವಿಸುವ ಮನೋಭಾವವೇ ದೇಶದ ಬಲವಾಗಿದೆ ಎಂದರು.





ವಿದ್ಯಾರ್ಥಿಗಳ ಕೈಯಲ್ಲೇ ನಾಳಿನ ಭಾರತದ ರೂಪವಿದ್ದು, ಸ್ವಚ್ಛತೆ, ಸಾರ್ವಜನಿಕ ಆಸ್ತಿಗಳ ರಕ್ಷಣೆ ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುವ ಮೂಲಕವೂ ದೇಶಸೇವೆ ಸಾಧ್ಯ. ಸಂವಿಧಾನವನ್ನು ಗೌರವಿಸಿ, ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವ ಮೂಲಕ ಭ್ರಷ್ಟಾಚಾರ ಹಾಗೂ ಅಸಮಾನತೆಯನ್ನು ತಡೆಯುವ ಚಿಂತನೆ ಬೆಳೆಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಂವಿಧಾನ ನಮ್ಮೆಲ್ಲರ ಬದುಕು ಮತ್ತು ಹಕ್ಕುಗಳನ್ನು ರಕ್ಷಿಸುತ್ತದೆ. ಯಾರಿಗೂ ತಮ್ಮ ನಿರ್ಧಾರಗಳನ್ನು ಇತರರ ಮೇಲೆ ಹೇರಲು ಅವಕಾಶವಿಲ್ಲ. ಎಲ್ಲವೂ ಸಂವಿಧಾನದ ಚಿಂತನೆಯ ಅಡಿಯಲ್ಲಿ ನಡೆಯಬೇಕು. ಸಂವಿಧಾನಕ್ಕೆ ಕೊಡುವ ಗೌರವದಲ್ಲಿ ಯಾವುದೇ ಕೊರತೆಯಾಗಬಾರದು ಎಂದರು.
ಸ್ವಾತಂತ್ರ್ಯ ಪಡೆದ ಕಡಿಮೆ ಅವಧಿಯಲ್ಲೇ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು, ಕುಡಿಯುವ ನೀರು ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುದಾನ ಲಭಿಸಿದೆ ಎಂದು ತಿಳಿಸಿದರು. ಗಣರಾಜ್ಯೋತ್ಸವದಂತಹ ಆಚರಣೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಾಗದೆ, ಸಾರ್ವಜನಿಕರ ಒಗ್ಗೂಡುವಿಕೆಯಿಂದ ಸಮಾಜಕ್ಕೆ ಸಂದೇಶ ನೀಡುವಂತಾಗಬೇಕು ಎಂದರು.




ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಕೀರ್ತಿ ಬೆಟ್ಟಂಪಾಡಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಅವಂತಿ ಶರ್ಮ (ಕೊಂಬೆಟ್ಟು), ರೋಶನ್ ಎಸ್.ಕೆ. (ಕೊಂಬೆಟ್ಟು) ಹಾಗೂ ಶ್ರೀಪೂಜಾ (ಶಾಂತಿನಗರ) ಅವರಿಗೆ ತಲಾ ರೂ. ೫೦ ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು.
ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಡಿವೈಎಸ್ಪಿ ಪ್ರಮೋದ್ ಕುಮಾರ್, ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.


