ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತಂಕ

ಕುಕ್ಕೆ ಸುಬ್ರಹ್ಮಣ್ಯ:
‘ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿ’ ಎಂದು ಸರ್ಕಾರ ಅಭಿಯಾನ ನಡೆಸುತ್ತಿರುವ ಒಂದು ಕಡೆ, ಇನ್ನೊಂದೆಡೆ ಸರ್ಕಾರಿ ಶಾಲೆಗಳಿಗೆ ಕನಿಷ್ಠ ಅಗತ್ಯ ಶಿಕ್ಷಕರನ್ನೂ ನಿಯೋಜಿಸದೆ ಮಕ್ಕಳ ಭವಿಷ್ಯದೊಂದಿಗೆ ಆಟವಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆ ಎದುರಾಗಿದ್ದು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಒಂದರಿಂದ ಏಳನೇ ತರಗತಿವರೆಗೆ ವಿದ್ಯಾರ್ಥಿಗಳಿರುವ ಈ ಶಾಲೆಗೆ ಸದ್ಯ ಸರ್ಕಾರದಿಂದ ನೇಮಕಗೊಂಡಿರುವುದು ಕೇವಲ ಒಬ್ಬ ಗೌರವ ಶಿಕ್ಷಕಿಯಷ್ಟೇ. ಶಾಲೆಯಲ್ಲಿದ್ದ ಮತ್ತೋರ್ವ ಕಾಯಂ ಶಿಕ್ಷಕಿ ಹೆರಿಗೆ ರಜೆಗೆ ತೆರಳಿದ್ದು, ಅವರ ಬದಲಿಗೆ ಪರ್ಯಾಯ ಶಿಕ್ಷಕ ವ್ಯವಸ್ಥೆ ಮಾಡುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ ಎನ್ನಲಾಗಿದೆ. ನೆರೆಯ ನಡುಗಲ್ಲು ಶಾಲೆಯಿಂದ ಒಬ್ಬ ಶಿಕ್ಷಕಿಯನ್ನು ವಾರಕ್ಕೆ ಕೇವಲ ಮೂರು ದಿನಗಳ ಮಟ್ಟಿಗೆ ನಿಯೋಜಿಸಲಾಗಿದ್ದು, ವಾರದ ಉಳಿದ ದಿನಗಳಲ್ಲಿ ಏಳು ತರಗತಿಗಳನ್ನು ಒಬ್ಬರೇ ಶಿಕ್ಷಕರು ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಶಾಲೆಯ ಅಭಿವೃದ್ಧಿಗಾಗಿ ಸ್ಥಳೀಯ ನಿವಾಸಿ ಶಿವಕುಮಾರ್ ಪೂಜೆಗೋಡು ಅವರು ಸ್ವಂತ ವೆಚ್ಚದಲ್ಲಿ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಪಾಠಕ್ಕೆ ಒಬ್ಬ ಶಿಕ್ಷಕಿಯನ್ನು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಎಸ್‌ಡಿಎಂಸಿ ವತಿಯಿಂದಲೂ ಒಬ್ಬ ಶಿಕ್ಷಕನನ್ನು ನೇಮಿಸಿಕೊಳ್ಳಲಾಗಿದೆ. ದಾನಿಗಳು ಹಾಗೂ ಸಮಿತಿ ಸದಸ್ಯರು ಆಸಕ್ತಿ ವಹಿಸುತ್ತಿದ್ದರೂ, ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದ ಇಲಾಖೆಯೇ ಈ ರೀತಿಯ ಅರೆಬರೆ ವ್ಯವಸ್ಥೆ ಮಾಡಿದರೆ ಮಕ್ಕಳ ಕಲಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪೋಷಕರು ಎತ್ತಿದ್ದಾರೆ. ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸುವಂತೆ ಪದೇಪದೇ ಮನವಿ ಮಾಡಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿರುವ ಈ ಶಾಲೆಗೆ ತಕ್ಷಣವೇ ಕಾಯಂ ಅಥವಾ ಪೂರ್ಣಾವಧಿ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸದಿದ್ದರೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *