ಕಾಣಿಯೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ಮನೆಯೊಂದರ ದಾಸ್ತಾನು ಕಟ್ಟಡದಲ್ಲಿ ಇರಿಸಲಾಗಿದ್ದ ಹಳೆ ಅಡಿಕೆ ಹಾಗೂ ಕಾಳುಮೆಣಸನ್ನು ಅಪರಿಚಿತರು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕಾಯಿಮಣ ಗ್ರಾಮದ ನಿವಾಸಿ ಉಷಾ ಎಂ. (37) ಅವರು ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ಮನೆಯ ಸಮೀಪದಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಮಾರಾಟಕ್ಕಾಗಿ ಕೃಷಿ ಉತ್ಪನ್ನಗಳನ್ನು ಗೋನಿಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದು, ಜನವರಿ 13ರಿಂದ 18ರ ನಡುವೆ ಸಂಜೆ 5.30 ಗಂಟೆಯ ಅವಧಿಯಲ್ಲಿ ಕಳವು ನಡೆದಿದೆ ಎಂದು ತಿಳಿಸಲಾಗಿದೆ.

ಕಳವುಗೈದವರು ಸುಮಾರು 35 ಕೆ.ಜಿ. ಕಾಳುಮೆಣಸು, 55 ಕೆ.ಜಿ. ಹಳೆ ಅಡಿಕೆ ಹಾಗೂ ಸುಲಿದಿಟ್ಟ ಹಳೆ ಅಡಿಕೆಯನ್ನು ದೋಚಿದ್ದು, ಇದರ ಒಟ್ಟು ಮೌಲ್ಯ ಸುಮಾರು ₹52,000 ಎಂದು ಅಂದಾಜಿಸಲಾಗಿದೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2026, ಕಲಂ 305(ಎ) BNS–2023ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ನಡುವೆ ಕೃಷಿಕರು ತಮ್ಮ ದಾಸ್ತಾನು ಮಳಿಗೆಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *