ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ದ್ವಾರಕೋತ್ಸವ–2026 ಕಾರ್ಯಕ್ರಮವು ಫೆಬ್ರವರಿ 1ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.





ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಂಪ್ರತಿ ನಡೆಯುವ ದ್ವಾರಕೋತ್ಸವವು ಗ್ರಾಹಕರು ಹಾಗೂ ಸಮಾಜದ ಸಕಲ ಬಂಧುಗಳ ಸಮ್ಮಿಲನದ ಮಹೋತ್ಸವವಾಗಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ಎಳೆಯರ ರಾಮಾಯಣ ಹಾಗೂ ಕಿಶೋರ ಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪ್ರದಾನ ನಡೆಯಲಿದೆ ಎಂದರು.


ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಹೇಶ್ ಕಜೆ ಉದ್ಘಾಟಿಸಲಿದ್ದು, ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭಾಸ್ಕರ ಬಾರ್ಯ ಹಾಗೂ ಬಿ.ವಿ. ಸೂರ್ಯನಾರಾಯಣ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವೇದ ವಿದ್ವಾಂಸ ವಿದ್ವಾನ್ ಗಣೇಶ್ ಭಟ್ ಪರಕ್ಕಜೆ, ಡಾ. ಹರಿಕೃಷ್ಣ ಪಾಣಾಜೆ, ವಿದ್ವಾನ್ ದೀಪಕ್ ಕುಮಾರ್ ಹಾಗೂ ಮುರಳೀಕೃಷ್ಣ ಅವರಿಗೆ ಸನ್ಮಾನ ನಡೆಯಲಿದೆ. ಜೊತೆಗೆ ಅರ್ತ್ಯಡ್ಕದ ಹರಿಕೃಷ್ಣ ಭಟ್ ಮತ್ತು ಉಪ್ಪಿನಂಗಡಿಯ ನವೀನಕೃಷ್ಣರ ನೂತನ ಗ್ರಂಥಗಳ ಲೋಕಾರ್ಪಣೆ ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಲೆ ಗ್ರಂಥ ಅನಾವರಣ ಮಾಡಲಿದ್ದಾರೆ.
ವಿಚಾರಗೋಷ್ಠಿ:
ಮಧ್ಯಾಹ್ನ 12 ಗಂಟೆಗೆ ‘ಸ್ವಾವಲಂಬನೆಗಾಗಿ ಆರ್ಥಿಕ ಹೂಡಿಕೆ’ ವಿಷಯದ ಮೇಲೆ ವಿಚಾರಗೋಷ್ಠಿ ನಡೆಯಲಿದೆ. ವಿರ್ವಕಾನಂದ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಡೀನ್ ಡಾ. ವಿಜಯ ಸರಸ್ವತಿ ಸಮನ್ವಯಕಾರರಾಗಿ ಭಾಗವಹಿಸಲಿದ್ದು, ಖ್ಯಾತ ಆರ್ಥಿಕ ತಜ್ಞ ಕುಂಬ್ಳೆ ನರಸಿಂಹ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಲಿದ್ದಾರೆ. ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಸಂಶೋಧಿತ ವಿಚಾರಗಳನ್ನು ಮಂಡಿಸಲಿದ್ದಾರೆ.
ಇಳಿ ಹಗಲಿನಲ್ಲಿ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಅಬ್ಬರತಾಳ, ಕೀಬೋರ್ಡ್ ವಾದನದೊಂದಿಗೆ ಯಕ್ಷಗಾನ ವೈಭವ, ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾರಾಧನ, ಝೀ ಕನ್ನಡ ಖ್ಯಾತಿಯ ಅಖಿಲಾ ಪಜಿಮಣ್ಣು ಬಳಗದಿಂದ ಗಾನರಸಧಾರ, ವಿದ್ವಾನ್ ಕಲಾದೀಪ ದೀಪಕ್ ಕುಮಾರ್ ಬಳಗದಿಂದ ಭರತನಾಟ್ಯ ಹಾಗೂ ಕೊನೆಯಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ‘ಭೂಮಿಪುತ್ರ’ ಯಕ್ಷಗಾನ ಬಯಲಾಟ ನಡೆಯಲಿದೆ.
ಊಟ–ಉಪಾಹಾರ, ಸನ್ಮಾನನೀಯರ ಭವ್ಯ ಮೆರವಣಿಗೆ, ಗ್ರಾಹಕರೊಂದಿಗೆ ವಿಚಾರ ವಿನಿಮಯಗಳೊಂದಿಗೆ ಸುಮಾರು ಹನ್ನೆರಡು ಗಂಟೆಗಳ ನಿರಂತರ ಕಾರ್ಯಕ್ರಮವಾಗಿರಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ, ಕಾರ್ಯದರ್ಶಿ ಗಣರಾಜ ಕುಂಬ್ಲೆ ಹಾಗೂ ಆಪರೇಷನ್ ಹೆಡ್ ದುರ್ಗಾ ಗಣೇಶ್ ಉಪಸ್ಥಿತರಿದ್ದರು.


