ಪುತ್ತೂರು: ಮನೆಗಳನ್ನು ಕಟ್ಟುವುದು ದೊಡ್ಡ ವಿಷಯವಲ್ಲ; ಒಂದು ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದು ದೊಡ್ಡ ಸಾಧನೆ. ದ್ವಾರಕಾ ಪ್ರತಿಷ್ಠಾನದ ಗೋಪಾಲಕೃಷ್ಣ ಭಟ್ ಅವರು ಪುರಾಣದ ದ್ವಾರಕೆಗೆ ಹೋಲಿಕೆ ಮಾಡುವಂತೆ ಮುಕ್ರಂಪಾಡಿಯಲ್ಲಿ ಹೊಸ ದ್ವಾರಕಾವನ್ನೇ ನಿರ್ಮಿಸಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಹೇಶ್ ಕಜೆ ಪ್ರಶಂಶಿಸಿದರು.
ಪುತ್ತೂರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ಆಯೋಜಿಸಲಾದ ದ್ವಾರಕೋತ್ಸವ–2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ನೀವು ಕನಸು ಕಾಣಿ, ನಾವು ಅದನ್ನು ಕಟ್ಟಿ ಕೊಡುತ್ತೇವೆ ಎನ್ನುವುದು ಸುಲಭದ ಮಾತಲ್ಲ. ಆದರೆ ದ್ವಾರಕಾ ಕಾರ್ಪೋರೇಷನ್ ಕಂಡ ಕನಸನ್ನು ನಿಜವಾಗಿಸಿ ತೋರಿಸಿದೆ. ಕನಸುಗಳೇ ಇಲ್ಲದ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ ಎನ್ನುವ ಹಿರಿಯರ ಮಾತಿಗೆ ಇದು ಜೀವಂತ ಉದಾಹರಣೆ” ಎಂದರು.
ಶ್ರೀಕೃಷ್ಣನ ದ್ವಾರಕೆಯು ಕೇವಲ ಒಂದು ಪಟ್ಟಣವಲ್ಲ; ಅದು ಭಕ್ತಿ, ಸಂಸ್ಕೃತಿ ಹಾಗೂ ದೈವೀಕ ಚೇತನೆಯ ಕೇಂದ್ರವಾಗಿತ್ತು. ಅದೇ ರೀತಿ ಅರ್ತ್ಯಡ್ಕದಿಂದ ಬಂದ ಗೋಪಾಲಕೃಷ್ಣ ಭಟ್ ಅವರು ಮುಕ್ರಂಪಾಡಿಯಲ್ಲಿ ಏನೂ ಇಲ್ಲದ ಪ್ರದೇಶವನ್ನು ಸಮಗ್ರ ಅಭಿವೃದ್ಧಿಯೊಂದಿಗೆ ರೂಪಿಸಿದ್ದಾರೆ. ಮನೆ ಕಟ್ಟಿಕೊಡುವುದರ ಜೊತೆಗೆ ಹೊಸ ವ್ಯಕ್ತಿತ್ವ ನಿರ್ಮಾಣಕ್ಕೂ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ದ್ವಾರಕೆ ಧರ್ಮದ ನೆಲೆ ಹಾಗೂ ಆನಂದದ ಸೆಲೆ ಆಗಿತ್ತು. ಈ ದ್ವಾರಕಾದಲ್ಲಿ ಮೌಲ್ಯಾಧಾರಿತ ಆಯೋಜನೆ, ಸಮುದಾಯದ ಸಹಕಾರ, ಸಂಸ್ಕೃತಿಯ ಆಚರಣೆ ಹಾಗೂ ಸ್ವಯಂಸೇವಕರ ಶ್ರಮ ಎಲ್ಲವೂ ಇದೆ. ಇದು ಪುರಾಣದ ದ್ವಾರಕೆಯ ಅನುಕರಣೆ ಅಲ್ಲ, ಪರಂಪರೆಯ ನಿರಂತರತೆ ಎಂದು ಮಹೇಶ್ ಕಜೆ ವಿಶ್ಲೇಷಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, “ಅಂದು ಗೋಪಾಲಕೃಷ್ಣನಿಂದ ದ್ವಾರಕೆ ಅಭಿವೃದ್ಧಿ ಹೊಂದಿತು; ಇಂದು ಈ ಗೋಪಾಲಕೃಷ್ಣನಿಂದ ಈ ದ್ವಾರಕಾ ಅಭಿವೃದ್ಧಿ ಹೊಂದುತ್ತಿದೆ” ಎಂದು ಗೋಪಾಲಕೃಷ್ಣ ಭಟ್ ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮಾತನಾಡಿ, ಇಲ್ಲಿ ಬಂದಾಗ ಶ್ರೀಕೃಷ್ಣನ ದ್ವಾರಕೆಗೆ ಪ್ರವೇಶಿಸಿದ ಅನುಭವವಾಗುತ್ತದೆ. ಅಸನ, ವಸನ, ವಸತಿ ಮೂಲಕ ಭಗವಾನ್ ಶ್ರೀಕೃಷ್ಣನ ಹೆಸರಿಗೆ ತಕ್ಕಂತೆ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಮಾತನಾಡಿ, “ಕೃಷ್ಣ ಇರುವಲ್ಲಿ ಸುಖ, ಸುಖ ಇರುವಲ್ಲಿ ನೆಮ್ಮದಿ, ನೆಮ್ಮದಿ ಇರುವಲ್ಲಿ ಉತ್ತಮ ಜೀವನ” ಎಂಬ ಕುವೆಂಪು ಅವರ ಮಾತುಗಳನ್ನು ಸ್ಮರಿಸಿದರು.

ದ್ವಾರಕಾ ವೇದರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೇದ ವಿದ್ವಾನ್ ಗಣೇಶ ಭಟ್ ಪರಕ್ಕಜೆ, ಬ್ರಹ್ಮ ಬರೆದಿದ್ದನ್ನು ಯಾರೂ ತಿದ್ದಲಾಗದು; ಆದರೆ ಲಲಿತಾ ತ್ರಿಪುರ ಸುಂದರಿ ತಾಯಿಗೆ ಸಾಧ್ಯ ಎಂಬುದಕ್ಕೆ ಪುರಾಣಗಳಲ್ಲಿ ಸಾಕಷ್ಟು ಪುರಾವೆಗಳಿವೆ ಎಂದರು.
ದ್ವಾರಕಾ ನೃತ್ಯರತ್ನ ಪ್ರಶಸ್ತಿ ಸ್ವೀಕರಿಸಿದ ವಿದ್ವಾನ್ ದೀಪಕ್ ಕುಮಾರ್ ಮಾತನಾಡಿ, ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಸ್ವಲ್ಪ ಶಿಕ್ಷಣ ಪಡೆದರೆ ಹೆಚ್ಚಿನ ಅಹಂಕಾರ ಬೆಳೆಯುತ್ತದೆ. ಆದರೆ ಅಹಂಕಾರರಹಿತ ಜೀವನವೇ ಯಶಸ್ಸಿಗೆ ದಾರಿ. ದ್ವಾರಕಾ ಪ್ರತಿಷ್ಠಾನ ಮನೆ ಕಟ್ಟುವ ಜೊತೆಗೆ ಮನವನ್ನು ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ದ್ವಾರಕಾ ಉದ್ಯಮಿ ರತ್ನ ಪ್ರಶಸ್ತಿ ಸ್ವೀಕರಿಸಿದ ಕಾಸರಗೋಡು ನೆಕ್ರಂಪಾರೆ ಸ್ಕಂದ ಪ್ಲಾಸ್ಟಿಕ್ಸ್‌ನ ಮುರಳೀಕೃಷ್ಣ ಮಾತನಾಡಿ, ಉದ್ಯಮದ ಜೊತೆಗೆ ಸಮಾಜಮುಖಿ ಸೇವೆ ಮಾಡುವವರು ಅಪರೂಪ. ಗೋಪಾಲಕೃಷ್ಣ ಭಟ್ ಅವರು ಅದನ್ನು ಸಾಧಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರಿಕೃಷ್ಣ ಭಟ್ ಅರ್ತ್ಯಡ್ಕ ರಚಿಸಿದ ಉತ್ತರನ ಜಂಬ, ಭಕ್ತಿ ತರಂಗ, ಒಗಟಿನ ಕೈಚೀಲ ಹಾಗೂ ನವೀನಕೃಷ್ಣ ಎಸ್. ಉಪ್ಪಿನಂಗಡಿ ರಚಿಸಿದ ಬಾಳಿನ ಬುತ್ತಿ ಕೃತಿಗಳನ್ನು ರಾಮಕುಂಜದ ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ಅನಾವರಣಗೊಳಿಸಿದರು. ದ್ವಾರಕಾ ಪ್ರತಿಷ್ಠಾನ ಪುಸ್ತಕಗಳನ್ನು ಮಾರಾಟಕ್ಕಾಗಿ ಅಲ್ಲ, ಉಚಿತವಾಗಿ ಹಾಗೂ ಸ್ಮರಣಿಕೆಯಾಗಿ ನೀಡಲು ಪ್ರಕಟಿಸುತ್ತಿದೆ ಎಂದು ಅವರು ತಿಳಿಸಿದರು.

ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ–ಮಹಾಭಾರತ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪುರಸ್ಕಾರ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಪುತ್ತೂರು ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು.

Leave a Reply

Your email address will not be published. Required fields are marked *