ಮಂಗಳೂರು: ನಗರದ ರಸ್ತೆಯ ಬದಿಯಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಬಂಟ್ವಾಳ ತಾಲೂಕು ಬಿಳಿಯೂರು ಕಾವೇರ್ಣ ಕ್ವಾಟ್ರಸ್ ಹೌಸ್ ನಿವಾಸಿ ಶಬ್ಬೀರ್ ಅವರ ಪುತ್ರ ಸಮೀರ್ ಅಲಿಯಾಸ್ ಕರುವೇಲ್ ಸರ್ಮಿ (23) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ, ಪಿ.ವಿ.ಎಸ್ ಜಂಕ್ಷನ್ ರಸ್ತೆಯಿಂದ ಕೆ.ಎಸ್. ರಾವ್ ರಸ್ತೆಗೆ ಸಂಪರ್ಕಿಸುವ ಕಚ್ಚಾ ರಸ್ತೆಯ ಬದಿಯ ಸಾರ್ವಜನಿಕ ಸಾಲಿನಲ್ಲಿ ಬ್ಯಾಗ್ ಹಿಡಿದುಕೊಂಡು ಗಾಂಜಾ ಮಾರಾಟಕ್ಕೆ ಬಂದಿದ್ದ ಆರೋಪಿಯು ಪೊಲೀಸರ ಗಮನಕ್ಕೆ ಬಂದಿದ್ದಾನೆ.
ಪೊಲೀಸರನ್ನು ಕಂಡ ಆರೋಪಿಯು ಓಡಲು ಯತ್ನಿಸಿದಾಗ, ಪೊಲೀಸರು ಅವನನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಅವನ ಬಳಿಯಲ್ಲಿ ಮಾದಕ ವಸ್ತುವಾದ ಗಾಂಜಾ ಪತ್ತೆಯಾಗಿದೆ.

ಪೊಲೀಸರು ಆರೋಪಿಯ ಬಳಿ ಇದ್ದ 46 ಗ್ರಾಂದ ಎರಡು ಪ್ಯಾಕೆಟ್‌ಗಳು, 42 ಗ್ರಾಂದ ಒಂದು ಪ್ಯಾಕೆಟ್ ಹಾಗೂ 1.64 ಕೆ.ಜಿ ತೂಕದ ಒಂದು ಪ್ಯಾಕೆಟ್ ಸೇರಿದಂತೆ ಒಟ್ಟು ₹56,700 ಮೌಲ್ಯದ ಗಾಂಜಾ, ಜೊತೆಗೆ ಐಫೋನ್ ಹಾಗೂ ಡಿಜಿಟಲ್ ತೂಕ ಮಾಪಕ ಸಾಧನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.

