ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.) ವತಿಯಿಂದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಭಾರತಿ ಎಂ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಫೆಬ್ರವರಿ 7ರಂದು ನಡೆಯಲಿದೆ. ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ತೆರೆದ ರಂಗಸ್ಥಳದಲ್ಲಿ ಇದೇ ಮೊದಲ ಬಾರಿಗೆ ಅರಂಗ್ರೇಟಂ ಆಯೋಜಿಸಿರುವುದು ವಿಶೇಷವಾಗಿದೆ.

ಸಂಜೆ 5.45ಕ್ಕೆ ನಾಟ್ಯ ನಿಕೇತನ ಕೊಲ್ಯದ ಕರ್ನಾಟಕ ಕಲಾಶ್ರೀ ಪುರಸ್ಕೃತ ಗುರು ರಾಜಶ್ರೀ ಉಳ್ಳಾಲ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ರಾಧಾಕೃಷ್ಣ ದೇವಸ್ಥಾನದ ವೇದಮೂರ್ತಿ ಗಿರಿಧರ ಭಟ್ ಪರಾಡ್ಕರ್ ಹಾಗೂ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಗಾಯನದಲ್ಲಿ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ (ಚೆನ್ನೈ), ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ (ಬೆಂಗಳೂರು), ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ ಎ.ಎನ್. (ಬೆಂಗಳೂರು) ಹಾಗೂ ವೀಣೆಯಲ್ಲಿ ವಿದ್ವಾನ್ ವಿ. ಸುಂದರ ರಾಜನ್ (ತಿರುವನಂತಪುರ) ಸಾಥ್ ನೀಡಲಿದ್ದಾರೆ.





ಭಾರತಿ ಎಂ. ಪರಿಚಯ:
ಕಡಬ ತಾಲೂಕಿನ ಎಂ. ಮಾಧವ ಭಟ್ ಮತ್ತು ಗಾಯತ್ರಿ ದಂಪತಿಯ ಪುತ್ರಿಯಾದ ಭಾರತಿ ಎಂ. ಕಲಿಕೆ, ಶಿಸ್ತು ಹಾಗೂ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಬೆಳೆದಿದ್ದಾರೆ. ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿರುವ ಅವರು ಶೈಕ್ಷಣಿಕ ಅಧ್ಯಯನದ ಜೊತೆಗೆ ಶಾಸ್ತ್ರೀಯ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. 10ನೇ ವಯಸ್ಸಿನಲ್ಲಿ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದ ಭಾರತಿ ಇತ್ತೀಚೆಗೆ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನೃತ್ಯಾಭ್ಯಾಸದ ಜೊತೆಗೆ ಗುರು ವಿದ್ವಾನ್ ಶ್ರೀಕಾಂತ್ ಕುದುಮಾರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಭಾರತಿ, ಸಂಗೀತ ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಇವರು ಈಗಾಗಲೇ 60ಕ್ಕೂ ಅಧಿಕ ವೇದಿಕೆಗಳಲ್ಲಿ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿ ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.


ನೃತ್ಯೋಪಾಸನಾ ಕಲಾ ಅಕಾಡೆಮಿ ಬಗ್ಗೆ:
2004ರಲ್ಲಿ ಆರಂಭವಾದ ನೃತ್ಯೋಪಾಸನಾ ಕಲಾ ಅಕಾಡೆಮಿ 21 ವರ್ಷಗಳ ಸೇವೆಯನ್ನು ಪೂರೈಸಿದ್ದು, ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿದ್ದು ಸಂಸ್ಥೆಗೆ ಶೇ.100 ಫಲಿತಾಂಶ ದಾಖಲಿಸುತ್ತಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿಯೂ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದು, ಗಡಿನಾಡ ಸಾಂಸ್ಕೃತಿಕ ಉತ್ಸವ, ಕಲಾರ್ಣವ ಸೇರಿದಂತೆ ನೃತ್ಯ ತರಂಗಿಣಿ ಸರಣಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ.


