ಪುತ್ತೂರು; ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕನಸಿನ ರಾಜ್ಯದ ೧೦೦ ಕಾಂಗ್ರೇಸ್ ಭವನ ನಿರ್ಮಾಣಕ್ಕೆ ಫೆ.೬ರಂದು ಪುತ್ತೂರಿನಲ್ಲಿ ಚಾಲನೆ ದೊರೆಯಲಿದೆ. ಸಂಜೆ.೫.೩೦ ಗಂಟೆಗೆ ಪುತ್ತೂರಿನ ಬಸ್ ನಿಲ್ದಾಣದ ಬಳಿಯಲ್ಲಿ ಕಾಂಗ್ರೇಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಅವರು ರಾಜ್ಯದ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಸ್ತಿಭಾರ ಹಾಕಿಲಿದ್ದಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ಪತ್ರಿಕೆಯೊಂದಿಗೆ ಅವರು ಮಾತನಾಡಿ, ಕೇಂದ್ರ ಸರ್ಕಾರದ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆದೇಶದಂತೆ ಈ ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೇಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಸ್ವಂತ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಸುಮಾರು ೭೮ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಜಾಗ ಮಂಜೂರುಗೊAಡಿದೆ. ಪುತ್ತೂರಿನ ನಗರದ ಹೃದಯಭಾಗದಲ್ಲಿ ರೂ.೨.೫೦ ಕೋಟಿ ವೆಚ್ಚದಲ್ಲಿ ಈ ಕಾಂಗ್ರೇಸ್ ಭವನ ನಿರ್ಮಾಣವಾಗಲಿದೆ. ಈ ಕಾಂಗ್ರೇಸ್ ಭವನ ಕಾಂಗ್ರೆಸ್ ಕಾರ್ಯಕರ್ತರ ಬೆವರಹನಿಯ ಪ್ರತೀಕವಾಗಿ ನಿರ್ಮಾಣವಾಗಲಿದೆ. ಕಾಂಗ್ರೇಸ್ ಕಾರ್ಯಕರ್ತರ ಶಕ್ತಿಯ ಕೇಂದ್ರವಾಗುವ ಭವನ ನಿರ್ಮಾಣಕ್ಕೆ ಕಾರ್ಯಕರ್ತರಿಂದಲೇ ಯಾವುದೇ ಒತ್ತಡಗಳಿಲ್ಲದೆ ಹಣ ಸಂಗ್ರಹಣೆ ನಡೆಯಲಿದೆ. ಸಾಮೂಹಿಕ ನಾಯಕತ್ವದಲ್ಲಿಯೇ ಈ ಭವನ ನಿರ್ಮಾಣವಾಗಲಿದೆ. ಮುಂದೆ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಯ ಕೇಂದ್ರವಾಗಲಿದೆ. ಕಟ್ಟಡದ ಕೆಳ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣದ ವ್ಯವಸ್ಥೆ ಹಾಗೂ ಮೊದಲ ಮಹಡಿ ಮತ್ತು ಎರಡನೇ ಮಹಡಿಯಲ್ಲಿ ಕಚೇರಿಗಳು ಮತ್ತು ಸಭಾಂಗಣದ ವ್ಯವಸ್ಥೆ ಮಾಡುವಂತೆ ನೀಲನಕಾಶೆ ತಯಾರಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕಾಗಿ ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳಿಂದ ಹಣ ಸಂಗ್ರಹ ಮಾಡಬಾರದು. ಕೇವಲ ಕಾರ್ಯಕರ್ತರ ಹಣದಿಂದ ಮಾತ್ರ ಈ ಭವನ ನಿರ್ಮಾಣವಾಗಬೇಕು. ಈ ಬಗ್ಗೆ ಈಗಾಗಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಬಗ್ಗೆ ಸಮಾಜಮಂದಿರದಲ್ಲಿ ಪೂರ್ವಬಾವಿ ಸಭೆ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಯು.ಟಿ ತೌಸೀಫ್,
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಪಂಜಿಗುಡ್ಡೆ ಈಶ್ವರ ಭಟ್, ಮುರಳೀಧರ ರೈ ಮಠಂತಬೆಟ್ಟು, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕುಂಬ್ರ ದುರ್ಗಾಪ್ರಸಾದ್ ರೈ, ಸುಪ್ರೀತ್ ಕಣ್ಣಾರಾಯ, ಪ್ರವೀಣ್ಚಂದ್ರ ಆಳ್ವ, ಅರ್ಷದ್ ದರ್ಭೆ, ಚಂದ್ರಪ್ರಭಾ ಗೌಡ, ಫಾರೂಕ್ ಬಾಯಬೆ, ಬಶೀರ್ ಪರ್ಲಡ್ಕ, ಗಿರೀಶ್ ರೈ ಸೆಂಟ್ಯಾರ್, ಪೂರ್ಣೇಶ್ ಭಂಡಾರಿ, ಲೋಕೇಶ್ ಪಡ್ಡಾಯೂರು ಮತ್ತಿತರರು ಭಾಗವಹಿಸಿದ್ದರು.








