ಪುತ್ತೂರು: ಗ್ರಾಮ ಪಂಚಾಯತ್‌ನಲ್ಲಿ ನಡೆದ ಹಣದ ಅವ್ಯವಹಾರ ಹಾಗೂ ಅಧಿಕಾರದ ದುರ್ಬಳಕೆಯನ್ನು ವಿರೋಧಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದ ಕೃಷಿಕ ದಂಪತಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲು ನಡೆದ ಪ್ರಯತ್ನ ವಿಫಲಗೊಂಡಿದ್ದು, ಸತತ ೯ ವರ್ಷಗಳ ಹೋರಾಟದ ಬಳಿಕ ಸತ್ಯಕ್ಕೆ ಜಯ ದೊರೆತ ಘಟನೆ ಕಾಣಿಯೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.



ಕಾಣಿಯೂರು ಗ್ರಾಮದ ಬೊಬ್ಬೆಕೇರಿ ಮಲೆಕೆರ್ಚಿ ನಿವಾಸಿ ರುಕ್ಮಯ್ಯ ಗೌಡ ಅವರು ೨೦೧೬ರಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಣದ ಅವ್ಯವಹಾರ ನಡೆಸಿದೆ ಎಂಬ ಆರೋಪದೊಂದಿಗೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಸತ್ಯಾಂಶ ಇರುವುದಾಗಿ ಮನವರಿಕೆಗೊಂಡ ಲೋಕಾಯುಕ್ತ ಅಧಿಕಾರಿಗಳು ಸ್ಥಳ ತನಿಖೆ ನಡೆಸಿ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರು.


ಈ ಬೆಳವಣಿಗೆಯ ಬಳಿಕ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯೋಗಿನಿ ಶೆಟ್ಟಿ ಹಾಗೂ ಉಪಾಧ್ಯಕ್ಷೆ ಕಮಲಾಕ್ಷಿ ಸೇರಿದಂತೆ ಆಡಳಿತ ಮಂಡಳಿ ರುಕ್ಮಯ್ಯ ಗೌಡರ ವಿರುದ್ಧ ವೈಯಕ್ತಿಕ ದ್ವೇಷ ತೋರಿದರೆಂದು ಆರೋಪಿಸಲಾಗಿದೆ. ರುಕ್ಮಯ್ಯ ಗೌಡರು ತಮ್ಮ ಕೃಷಿ ಜಮೀನಿನ ಕೊಳವೆಬಾವಿಗೆ ಕುಡಿಯುವ ನೀರು ಸರಬರಾಜಿಗಾಗಿ ಅಳವಡಿಸಿದ್ದ ೧.೫ ಎಚ್‌ಪಿ ಪಂಪ್‌ನ್ನು ಅಕ್ರಮ ಎಂಬ ನೆಪದಲ್ಲಿ ತೆರವುಗೊಳಿಸಿ ಪಂಚಾಯತ್ ಕಚೇರಿಗೆ ಕೊಂಡೊಯ್ದಿದ್ದರು ಎನ್ನಲಾಗಿದೆ. ಅಲ್ಲದೆ, ರುಕ್ಮಯ್ಯ ಗೌಡ ಹಾಗೂ ಅವರ ಪತ್ನಿಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಲು ಪ್ರಯತ್ನ ನಡೆಸಲಾಗಿತ್ತು.


ಇದರಿಂದ ಆರಂಭವಾದ ರುಕ್ಮಯ್ಯ ಗೌಡರ ಏಕವ್ಯಕ್ತಿ ಕಾನೂನು ಹೋರಾಟಕ್ಕೆ ಇದೀಗ ಫಲ ದೊರೆತಿದ್ದು, ವೈಯಕ್ತಿಕ ದ್ವೇಷದಿಂದ ದಾಖಲಾದ ಪ್ರಕರಣ ಎಂದು ಪರಿಗಣಿಸಿ ಸುಳ್ಯ ನ್ಯಾಯಾಲಯ ಎರಡೂ ಪ್ರಕರಣಗಳಿಂದ ದಂಪತಿಯನ್ನು ಖುಲಾಸೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳಿಗೆ ನ್ಯಾಯ ದೊರೆತಿರುವುದಾಗಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಗ್ರಾಮ ಪಂಚಾಯತ್‌ನಲ್ಲಿ ನಡೆದ ಅವ್ಯವಹಾರ ಸಂಬಂಧಿತ ಪ್ರಕರಣವು ಬೆಂಗಳೂರಿನಲ್ಲಿ ಇನ್ನೂ ವಿಚಾರಣಾ ಹಂತದಲ್ಲಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ ಪರಿಣಾಮ ಹಲವು ಕಿರುಕುಳಗಳನ್ನು ಅನುಭವಿಸಿದರೂ ಸಾರ್ವಜನಿಕರಿಗೆ ಸತ್ಯ ತಿಳಿಯಬೇಕೆಂಬ ಉದ್ದೇಶದಿಂದ ಮಾಧ್ಯಮಗಳ ಮುಂದೆ ತಮ್ಮ ಹೋರಾಟದ ವಿವರವನ್ನು ರುಕ್ಮಯ್ಯ ಗೌಡ ಹಂಚಿಕೊಂಡಿದ್ದಾರೆ.
೧೭ ಸೆಂಟ್ಸ್ ಜಾಗದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ರುಕ್ಮಯ್ಯ ಗೌಡ ಅವರು ಕಾನೂನು ಹೋರಾಟಕ್ಕಾಗಿ ಆರ್ಥಿಕವಾಗಿ ದೊಡ್ಡ ನಷ್ಟ ಅನುಭವಿಸಿದ್ದಾಗಿ ತಿಳಿಸಿದ್ದಾರೆ. ಕಾನೂನು ಹೋರಾಟಕ್ಕೆ ವ್ಯಯವಾದ ಹಣದಲ್ಲಿ ಎಕರೆಗಟ್ಟಲೆ ಭೂಮಿಯನ್ನು ಖರೀದಿಸುವಷ್ಟು ಮೊತ್ತ ವ್ಯಯವಾಗಿದೆ ಎಂದು ಅವರು ತಿಳಿಸಿದ್ದಾರೆ. ನೀರಿನ ಪಂಪ್ ತೆರವುಗೊಳಿಸಿದ ಪರಿಣಾಮ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ಪುತ್ತೂರು ನ್ಯಾಯಾಲಯದಲ್ಲಿ ಗ್ರಾಮ ಪಂಚಾಯತ್ ವಿರುದ್ಧ ದಾವೆ ಕೂಡ ಹೂಡಲಾಗಿದೆ.

ಈ ಕುರಿತು ಮಾತನಾಡಿದ ರುಕ್ಮಯ್ಯ ಗೌಡ, “ಕುಡಿಯುವ ನೀರಿಲ್ಲದೆ ಸುಮಾರು ೫೦ ಸಾವಿರ ರೂ. ಮೌಲ್ಯದ ಎರಡು ದನಗಳನ್ನು ಕಳೆದುಕೊಂಡಿದ್ದೇನೆ. ಕುಟುಂಬದ ಜೀವನಾಧಾರವಾಗಿದ್ದ ಸುಮಾರು ೩೦೦ ಅಡಿಕೆ ಗಿಡಗಳು ನೀರಿಲ್ಲದೆ ಒಣಗಿ ಹೋದವು. ನಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗಟ್ಟಲು ಪ್ರಯತ್ನಿಸಿದರು. ಆದರೂ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟು ಹೋರಾಟ ಮುಂದುವರಿಸಿದೆ. ಈಗ ನ್ಯಾಯ ದೊರೆತಿದ್ದು ನನಗೆ ನೆಮ್ಮದಿ ತಂದಿದೆ” ಎಂದು ಹೇಳಿದರು.

