ಪುತ್ತೂರು: ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಅವರು ಡಿ.ಕೆ.ಶಿವಕುಮಾರ್ ಅವರು 6 ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಬರುತ್ತಾರೆ ಎಂದು ಹೇಳಿದ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯಕ್ರಮ ಮುಗಿದ ಬಳಿಕ ಪತ್ರಕರ್ತರು ಈ ಕುರಿತು ಪ್ರಶ್ನಿಸಿದಾಗ, “ಅವರದ್ದು ಪ್ರಾರ್ಥನೆ. ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂದು ಉತ್ತರಿಸಿದರು. ಇದೇ ಮಾತನ್ನು ಈ ಹಿಂದೆ ಹಲವು ಬಾರಿ ಅವರು ಉಲ್ಲೇಖಿಸಿದ್ದನ್ನೂ ಅವರು ನೆನಪಿಸಿದರು.





ಪುತ್ತೂರು ಕಾಂಗ್ರೆಸ್ ಭವನದ ಶಿಲಾನ್ಯಾಸ ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯಿಂದ ಇಳಿದು ತೆರಳುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬಹಳ ಪವಿತ್ರ ದಿನದಲ್ಲಿ ಪುತ್ತೂರು ಕಾಂಗ್ರೆಸ್ ಭವನದ ಶಿಲಾನ್ಯಾಸ ಮಾಡಿರುವುದಾಗಿ ಹೇಳಿದರು. ರಾಜ್ಯದ ಉಳಿದ ಕಡೆಗಳಲ್ಲಿಯೂ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ವರ್ಚುವಲ್ ಮೂಲಕ ಉದ್ಘಾಟನೆ ಮಾಡುವ ಯೋಜನೆ ಇದ್ದು, ತಾವು ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ 6 ತಿಂಗಳಲ್ಲಿ ಸಿಎಂ ಆಗಿ ಬರುತ್ತಾರೆ ಎಂಬ ಹೇಳಿಕೆ ಕುರಿತು ಮತ್ತೆ ಪ್ರಶ್ನಿಸಿದಾಗ, “ಆಸೆ ಪಡುವವರನ್ನು ತಪ್ಪು ಹೇಳೋಕಾಗುತ್ತದಾ? ಅವರದ್ದು ಪ್ರಾರ್ಥನೆ. ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ನೋಡೋಣ” ಎಂದು ಹೇಳಿ ತೆರಳಿದರು.




