ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ, ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ ಬೃಹತ್ ಸಂಗಮವಾಗಿ ರಾಜ್ಯ ಸಮಾವೇಶ-೨೦೨೬ ಮತ್ತು ಅಭಿಯಾನದ ಅಂಗವಾಗಿ ೧೨ ವರ್ಷದೊಳಗೆ ೭೫ಶಾಲೆಗಳಿಗೆ ನೀಡಿದ ಜಾರು ಬಂಡಿ ಸಹಿತ ವಿವಿಧ ಕ್ರೀಡಾಚಟುವಟಿಗೆಳಿಗೆ ನೀಡಿದ ಪ್ರೋತ್ಸಾಹದ ೭೫ರ ಸಂಭ್ರಮವು ಫೆ. ೧೧ರಂದು ಮಧ್ಯಾಹ್ನ ೨ ಗಂಟೆಗೆ ಮಂಗಳೂರು ಪುಭರವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪುತ್ತೂರು ತಾಲೂಕು ಅಧ್ಯಕ್ಷೆ ನಿವೃತ್ತ ಶಿಕ್ಷಕಿ ವೇದಾವತಿ ಮತ್ತು ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಗೌರವಾಧ್ಯಕ್ಷರಾದ ಮಹಮ್ಮದ್ ಕುಕ್ಕುವಳ್ಳಿ
ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.





ಕನ್ನಡ ಶಾಲೆಯ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ಮಾಡುವ ಮೂಲಕ ಕಳೆದ ಹಲವಾರು ವರ್ಷಗಳಿಂದ ವಿವಿದ ಚಟುವಟಿಕೆಗಳನ್ನು ಹಮ್ಮಿಕೊಂಡು ಇದೀಗ ಪುರಭವನದಲ್ಲಿ ಅಭಿಯಾನದ ಸಂಭ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯದ ೩೧ ಜಿಲ್ಲಾಧ್ಯಕ್ಷರ ಪದಗ್ರಹಣ ಸಂಭ್ರಮ, ಶಿಕ್ಷಕರಿಗೆ ಗುರುವಂದನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂಗವಿಕಲ ವಿದ್ಯಾರ್ಥಿಗಳಿಗೆ ವ್ಹೀಲ್ ಚೇಯರ್ ವಿತರಣೆ, ಶ್ರವಣಯಂತ್ರ ವಿತರಣೆ, ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಅಭಿಯಾನದ ಕ್ರಾಂತಿ ಗೀತೆಗಳಿಗೆ ಹೆಜ್ಜೆ ಹಾಕುವ ಯುವ ಶಕ್ತಿಯ ಕಲಾವೈಭವ ನಡೆಯಲಿದೆ. ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡುರಾವ್, ಶಾಸಕರಾದ ಸುರೇಶ್ ಕುಮಾರ್, ವೇದವ್ಯಾಸ ಕಾಮತ್ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.



ಪ್ರತಿ ಗ್ರಾಮದಲ್ಲೂ ಜಾಗೃತಿ;
ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಪ್ರಯತ್ನ ಮಾಡಿದ್ದೇವೆ. ಮೂಲಭೂತ ಸೌಕರ್ಯ ಒದಗಿಸುತ್ತಿದ್ದೇವೆ. ಒಂದು ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಮತ್ತೊಂದು ಕಡೆ ವಿದ್ಯಾರ್ಥಿಗಳನ್ನು ಕನ್ನಡ ಶಾಲೆಗೆ ಸೇರಿಸುವಲ್ಲಿ ಪೋಷಕರ ಮನಪರಿವರ್ತನೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್ಡಿಎಂಸಿ ಸದಸ್ಯರು ಅಭಿಯಾನಕ್ಕೆ ಪೂರ್ಣ ಸಹಕಾರ ನೀಡಬೇಕು. ನಾವು ಕೂಡಾ ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶಿಕ್ಷಣದ ಕುರಿತು ಮುದ್ರಿಸಿದ ಸುಮಾರು ೨೦ ಪುಟದ ಪುಸ್ತಕವನ್ನು ಮುಖ್ಯಮಂತ್ರಿಗಳಿಗೆ ಕುದ್ದು ನೀಡಿ ವಿಚಾರ ವಿನಿಮಯ ಮಾಡಿದ್ದೇವೆ. ಜೊತೆಗೆ ಪ್ರತಿ ಗ್ರಾಮದಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಗೌರವಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಗೌರವ ಸಲಹೆಗಾರ ನಾರಾಯಣ ರೈ ಕುಕ್ಕುವಳ್ಳಿ, ಮಾಧ್ಯಮ ವಕ್ತಾರ ಯೂಸುಫ್ ರೆಂಜಲಾಡಿ, ಖಜಾಂಚಿ ಅನುಸೂಯ ಅವರು ಉಪಸ್ಥಿತರಿದ್ದರು.


