ಪುತ್ತೂರು: ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್- ಐಪಿಎಸ್ ಅಕಾರಿಗಳಾಗಬೇಕೆಂಬ ಆಶಯದಿಂದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ, ಕನ್ನಡದಲ್ಲೂ ಐಎಎಸ್ ಬರೆಯಿರಿ ಎಂಬ ಘೋಷ ವಾಕ್ಯದಡಿಯಲ್ಲಿ ಅಕ್ಷಯ ಕಾಲೇಜಿನ ಆಶ್ರಯದಲ್ಲಿ ಫೆ. 18ರಂದು ಬುಧವಾರ ಬೆಳಗ್ಗೆ 9.30ರಿಂದ ಐಎಎಸ್- ಐಪಿಎಸ್ ಹಾಗೂ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ನಡೆಯಲಿದೆ.



ಕಾರ್ಯಕ್ರಮವು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಪುತ್ತೂರು ಯುವ, ಅಕ್ಷಯ ರೋಟರಾಕ್ಟ್ ಕ್ಲಬ್ ಹಾಗೂ ಐಕ್ಯೂಎಸಿ ಸಹಕಾರದಲ್ಲಿ ನಡೆಯಲಿದೆ.
ಸಹಾಯಕ ಆಯುಕ್ತರಾದ ಸ್ಟೇಲ್ಲಾ ವರ್ಗಿಸ್ ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಐಎಎಸ್ ದರ್ಶನ ಸಂಸ್ಥೆಯ ಮುಖ್ಯಸ್ಥ ದರ್ಶನ್ ಗರ್ತಿಕೆರೆಯವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರ ನಡೆಸಿಕೊಡಲಿದ್ದಾರೆ. ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು, ಪೋಷಕರು ಹಾಗೂ ಅಧ್ಯಾಪಕರು ಕಾರ್ಯಗಾರದಲ್ಲಿ ಭಾಗವಹಿಸಬಹುದು. ಭಾಗವಹಿಸಲು ಇಚ್ಛಿಸುವವರು ಫೆ. 17ರ ಸಂಜೆ 4ಗಂಟೆಯೊಳಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ (ಮೊ. 9844401295 ಅವರಿಗೆ ವಾಟ್ಸಪ್ ಮೂಲಕ ಹೆಸರು ನೋಂದಾಯಿಸಲು ವಿನಂತಿಸಲಾಗಿದೆ.



ಐಎಎಸ್-ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದು ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 3 ವರ್ಷಗಳಿಂದ ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನ ನಡೆಸುತ್ತಿದೆ. ಇದುವರೆಗೆ ಸುಮಾರು 50,000 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.


