ಮೈಸೂರು: ನಮಾಜ್ ಸಮಯದಲ್ಲಿ ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಮೈಸೂರು ನಗರದ ಎನ್ ಆರ್ ಮೊಹಲ್ಲಾದ ಮಸೀದಿಯಲ್ಲಿ ಫೆಬ್ರವರಿ 13ರಂದು ಶುಕ್ರವಾರ ಸಂಭವಿಸಿದೆ.





ನಮಾಜ್ ಪ್ರಾರ್ಥನೆಗೂ ಮೊದಲು ಮಾತಿನ ಜಗಳ ಆರಂಭವಾಗಿ, ಬಳಿಕ ಅದು ಹಲ್ಲೆಗೆ ತಿರುಗಿದುದಾಗಿ ತಿಳಿದು ಬಂದಿದೆ. ಆರೋಪಿಗಳು ಬಾಲಕನನ್ನು ಅಟ್ಟಾಡಿಸಿ ಕಾಲಿನಿಂದ ಒದ್ದಾಡಿರುವ ದೃಶ್ಯಗಳು ಮಸೀದಿಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿವೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.



ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಪ್ರಕರಣ ದಾಖಲಾಗಿದೆ. ಅವೇಜ್, ಪರವೇಜ್, ಜಹೀದ್ ಹಾಗೂ ಉಮ್ಮರ್ ಎಂಬವರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಇವರಲ್ಲಿ ಒಬ್ಬರು ರೌಡಿಶೀಟರ್ ಆಗಿದ್ದಾರೆ ಎಂಬುದಾಗಿ ಬಾಲಕನ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ. ಆರೋಪಿಗಳು ನಶೆಯಲ್ಲಿ ಇದ್ದಾರೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.

