ಸಾವಿರಾರು ಮಂದಿ ಭಕ್ತರಿಂದ ನಿರಂತರ ಪ್ರದಕ್ಷಿಣೆ.
ಪುತ್ತೂರು:ನಾಡಿನ ಕಾರಣಿಕ ಶಿವಕ್ಷೇತ್ರಗಳಲ್ಲಿ ಒಂದಾಗಿರುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.ವಿಶೇಷವಾಗಿ ಪ್ರಥಮ ಬಾರಿಗೆ ಮಹಾ ಶಿವಪಂಚಾಕ್ಷರಿ ಯಜ್ಞ ಸಹಿತ ಶತರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು.

ದೇವಳದ ಹೊರಾಂಗಣದ ರಾಜಗೋಪುರದ ಮಂಟಪದಲ್ಲಿ ಸುಮಾರು 32 ತಂಡಗಳಿಂದ ಜಾಗರಣಾ ಭಜನಾ ಕಾರ್ಯಕ್ರಮ ನಡೆಯಿತು.ಶಾಸಕ ಅಶೋಕ್ ಕುಮಾರ್ ರೈ ಅವರು ಮಧ್ಯಾಹ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.







ಬೆಳಗ್ಗಿನಿಂದಲೇ ದೇವಳಕ್ಕೆ ಭಕ್ತ ಸಾಗರ ಹರಿದು ಬಂದಿತ್ತು.ಬಹುತೇಕ ಮಂದಿ ಭಕ್ತರು ದೇವಳದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಪ್ರದಕ್ಷಿಣೆ ಬರುತ್ತಿದ್ದರು.ಪ್ರಾತಃಕಾಲ ಗಣಪತಿ ಹೋಮದ ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಂಡಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಭಜನಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು.ಮಧ್ಯಾಹ್ನ ಮಹಾಶಿವಪಂಚಾಕ್ಷರಿ ಯಜ್ಞದ ಪೂರ್ಣಾಹುತಿ ನಡೆಯಿತು.ಬಳಿಕ ಮಹಾಪೂಜೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ರಾತ್ರಿ ವೇಳೆ ಶ್ರೀ ದೇವರ ಬಲಿ ಉತ್ಸವ ಹೊರಟು ಉಡುಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ಕಂಡನಾಯಕನ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು.ಪಲ್ಲಕ್ಕಿ ಉತ್ಸವ, ಸ್ಯಾಕ್ರೋಫೋನ್ ವಾದನ, ಬ್ಯಾಂಡ್, ಭಜನೆ ಸುತ್ತು ನಡೆದು ಚಂದ್ರಮಂಡಲ ರಥೋತ್ಸವ ನಡೆಯಿತು.ಬಳಿಕ ಕೆರೆ ಉತ್ಸವ ನಡೆದು ದೇವರು ಒಳಗಾದ ಬಳಿಕ ದೇವರಿಗೆ ಏಕಾದಶರುದ್ರಾಭಿಷೇಕ, ರಾತ್ರಿ ಪೂಜೆ, ದೇವರ ಭೂತಬಲಿ ಉತ್ಸವ ತಡರಾತ್ರಿಯಲ್ಲಿ ಮಹಾಮಹಿಮಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಉತ್ಸವ ಬಲಿ ನಡೆಯಿತು.


ಬೆಳಿಗ್ಗೆ ದೇವಳದಲ್ಲಿ ವೇ ಮೂ ಜಯರಾಮ ಜೋಯಿಷ ಅವರ ನೇತೃತ್ವದಲ್ಲಿ ಮಹಾ ಶಿವಪಂಚಾಕ್ಷರಿ ಯಜ್ಞ ನಡೆಯಿತು.ಮಧ್ಯಾಹ್ನ ಗಂಟೆ 11ಕ್ಕೆ ಯಜ್ಞದ ಪೂರ್ಣಾಹುತಿ ನಡೆಯಿತು. ಪೂರ್ಣಾಹುತಿ ಸಂದರ್ಭ ಫಲಪುಷ್ಪ, ಬಿಲ್ವಪತ್ರೆಗಳನ್ನು ಯಜ್ಞಕ್ಕೆ ಅರ್ಪಿಸಲಾಯಿತು.ಬಳಿಕ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಮಹಾಪೂಜೆ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ, ಸುಭಾಶ್ ರೈ ಬೆಳ್ಳಿಪ್ಪಾಡಿ,ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ,ಹಿರಿಯರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ, ಯು.ಪಿ.ರಾಮಕೃಷ್ಣ ಗೌಡ, ನಗರಸಭಾ ನಿಕಟಪೂರ್ವ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.



