ಕಡಬ: ಸರ್ವಜನಿಕರ ಪ್ರಶ್ನೆಗೆ ಸ್ಪಂದಿಸದ ಕಾಮಗಾರಿಗಳ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ (RTI) ಮತ್ತೊಮ್ಮೆ ಪರಿಣಾಮ ತೋರಿಸಿದೆ. ಕಡಬ–ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಬಳಿಕ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಚುರುಕುಗೊಂಡಿದ್ದಾರೆ.




ಈಗಾಗಲೇ ನಡೆದ ಗುದ್ದಲಿ ಪೂಜೆಯ ಬಳಿಕವೂ ಕಾಮಗಾರಿ ನೆರೆವೇರಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ಮತ್ತೊಮ್ಮೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಇದನ್ನು ಸಾರ್ವಜನಿಕರು ವ್ಯಂಗ್ಯವಾಗಿ ಪ್ರಶ್ನಿಸಿದ್ದು, “ಒಮ್ಮೆ ಪೂಜೆ ಮಾಡಿದ ಕೆಲಸವೇ ಇನ್ನೂ ಮುಗಿದಿಲ್ಲ; ಮತ್ತೆ ಪೂಜೆ ಯಾಕೆ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.


ಕಾಮಗಾರಿಯ ಸಂಪ್ರದಾಯ ವಿವರ, ಅನುಮೋದಿತ ಬಜೆಟ್ ಮತ್ತು ವೆಚ್ಚದ ದಾಖಲೆಗಳು, ಕಾಮಗಾರಿಯ ಪ್ರಗತಿ ವರದಿ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳಿ RTI ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸಲ್ಲಿಕೆಯಿಂದಾಗಿ ಇಲಾಖೆಯವರು ಕಾಮಗಾರಿ ತ್ವರಿತಗೊಳಿಸಲು ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.


ಪೇಟೆಯಿಂದ ಓಂಟತ್ತುವರೆಗೆ ಇರುವ ರಸ್ತೆ ಹದಗೆಟ್ಟು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಕೆಸರು ಹಾಗೂ ಗುಂಡಿಗಳಿಂದ ಸಂಚಾರ ಕಷ್ಟಕರವಾಗಿದೆ. ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಿ, ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ಟಾರೆ, ಮಾಹಿತಿ ಹಕ್ಕು ಕಾಯ್ದೆ-2005ರ ಪರಿಣಾಮವಾಗಿ ಸಾರ್ವಜನಿಕ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಅಗತ್ಯ ಮತ್ತೊಮ್ಮೆ ಮೆರೆದಿದೆ.


