ಕಡಬ, ಫೆ.17: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ವಚ್ಛತಾ ಯೋಜನೆಯಡಿ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಜಾಗ ಆಯ್ಕೆ ವಿಚಾರದಲ್ಲಿ ಕಡಬ ಪಟ್ಟಣ ಪಂಚಾಯತ್ ಆಡಳಿತ ಸಂಕಷ್ಟಕ್ಕೆ ಸಿಲುಕಿದೆ. ಮೊದಲಿಗೆ ಕಳಾರದ ತಿಮರಡ್ಕದಲ್ಲಿ ಕಾಮಗಾರಿ ಆರಂಭವಾಗಿದ್ದರೂ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ಆಯ್ಕೆಯಾಗಿ ಕೋಡಿಂಬಾಳದ ನೆಲ್ಲಿಪಡ್ಪು ಪ್ರದೇಶ ಪರಿಶೀಲನೆ ನಡೆಸಲಾಗಿತ್ತು. ಆದರೆ ಅಲ್ಲಿ ಕೂಡ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಕಾರಣ ಇದೀಗ ಮೂರನೇ ಜಾಗದ ಹುಡುಕಾಟ ಆರಂಭಗೊಂಡಿದೆ.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಕಡ್ಡಾಯಗೊಳಿಸುವಂತೆ ಸರಕಾರದಿಂದ ಆದೇಶವಿದ್ದು, ಅನುಷ್ಠಾನ ಹಂತದಲ್ಲಿ ಜನರ ವಿರೋಧದಿಂದಾಗಿ ಯೋಜನೆ ಮುಂದುವರಿಸಲು ಅಡಚಣೆ ಉಂಟಾಗಿದೆ.
ಈ ಯೋಜನೆ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಜಾರಿಗೆ ಬರಲಿದ್ದು, ಬಯಲು ಬಹಿರ್ದೆಸೆ ಮುಕ್ತತೆ ಸಾಧನೆ ಹಾಗೂ ಘನ–ದ್ರವ ತ್ಯಾಜ್ಯ ನಿರ್ವಹಣೆಯನ್ನು ಸುಸ್ಥಿರಗೊಳಿಸುವುದು ಇದರ ಉದ್ದೇಶವಾಗಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಸೂಚಿಸಿದೆ.




ತಿಮರಡ್ಕ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ಆರಂಭವಾಗಿತ್ತು. ಆರಂಭದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲದ ಕಾರಣ ಮೌನವಾಗಿದ್ದ ಸ್ಥಳೀಯರು, ನಂತರ ಘಟಕವು ಜನವಸತಿ ಪ್ರದೇಶ, ಶಾಲೆ ಹಾಗೂ ಮಸೀದಿ ಸಮೀಪದಲ್ಲಿರುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುವ ಭೀತಿ ವ್ಯಕ್ತಪಡಿಸಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಯೋಜನೆಯನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇದರ ನಡುವೆಯೇ ಆಡಳಿತ ಮಂಡಳಿ ಕೋಡಿಂಬಾಳ ಗ್ರಾಮದ ನೆಲ್ಲಿಪಡ್ಪು ಪ್ರದೇಶವನ್ನು ಪರಿಶೀಲಿಸಿರುವ ಮಾಹಿತಿ ತಿಳಿದ ಕೂಡಲೇ ಅಲ್ಲಿ ಕೂಡ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆ, ದೇವಸ್ಥಾನ, ಚರ್ಚ್ ಹಾಗೂ ಜನವಸತಿ ಪ್ರದೇಶಗಳ ಸಮೀಪದಲ್ಲಿರುವುದನ್ನು ಉಲ್ಲೇಖಿಸಿ ಆಕ್ಷೇಪ ಸಲ್ಲಿಸಲಾಗಿದೆ.


ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕಗಳಿಗೆ ಮಂಜೂರಾತಿ ದೊರೆತಿದ್ದು, ಕಡಬ ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ಸ್ಥಾಪನೆಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಆಯ್ಕೆ ಪ್ರಶ್ನಾರ್ಥಕವಾಗಿರುವುದರಿಂದ ಆಡಳಿತ ಪೇಚಿಗೆ ಸಿಲುಕಿದೆ.
ಸಾರ್ವಜನಿಕರ ಆತಂಕಗಳನ್ನು ಪರಿಹರಿಸುವಂತೆ ಹಾಗೂ ಪರಿಸರ–ಆರೋಗ್ಯದ ಸುರಕ್ಷತೆ ಖಚಿತಪಡಿಸುವಂತೆ ಯೋಜನೆ ಜಾರಿಗೊಳಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಎಲ್ಲರಿಗೂ ಅಂಗೀಕಾರವಾಗುವ ಮೂರನೇ ಜಾಗದ ಹುಡುಕಾಟಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿದೆ.



