ಬೆಂಗಳೂರು/ಕಡಬ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್‌ನ ಮುಖ್ಯಸ್ಥ ಸಂತೋಷ್ ಕಡಬರನ್ನು ಬೆಂಗಳೂರು ಸಿಟಿ ಪೊಲೀಸ್ ಇಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಸಂತೋಷ್ ಕಡಬ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಸತತವಾಗಿ ವಿವಾದಾತ್ಮಕ ಹಾಗೂ ಅವಹೇಲನಕಾರಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ವಿಚಾರವಾಗಿ ಬೆಂಗಳೂರು ನ್ಯಾಯಾಲಯವು ಈ ಹಿಂದೆ ಯಾವುದೇ ರೀತಿಯ ಅವಹೇಲನಕಾರಿ ವಿಷಯಗಳನ್ನು ಪ್ರಸಾರ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದೇಶದ ಹೊರತಾಗಿಯೂ ಮತ್ತೆ ಅದೇ ರೀತಿಯ ವಿಷಯಗಳನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು 30 ದಿನಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯದ ಶಿಕ್ಷೆಯ ಆದೇಶ ಹೊರಬಿದ್ದ ತಕ್ಷಣವೇ ಪೊಲೀಸರು ಹಾಗೂ ಕೋರ್ಟ್ ಸಿಬ್ಬಂದಿ ಕಡಬಕ್ಕೆ ಆಗಮಿಸಿ ಸಂತೋಷ್ ಕಡಬ ರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಅವರನ್ನು ಬೆಂಗಳೂರಿಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸುವ ಹಾಗೂ ಜೈಲಿಗೆ ಕಳುಹಿಸುವ ಪ್ರಕ್ರಿಯೆಗಳು ಮುಂದುವರಿದಿವೆ.

ಶ್ರೀ ಕ್ಷೇತ್ರದ ಪರವಾಗಿ ಹಿರಿಯ ವಕೀಲ ರಾಜಶೇಖರ್ ಸಿರಿಯಾರು ನ್ಯಾಯಾಲಯದಲ್ಲಿ ವಾದ ಮಂಡಿಸಿ, “ಸಾಮಾಜಿಕ ಜಾಲತಾಣಗಳು ಸಮಾಜವನ್ನು ತಿದ್ದುವ ಸಾಧನವಾಗಿರಬೇಕು, ಧಾರ್ಮಿಕ ನಂಬಿಕೆಗಳು ಮತ್ತು ಪವಿತ್ರ ಕ್ಷೇತ್ರಗಳನ್ನು ನಿಂದಿಸುವ ವೇದಿಕೆಯಾಗಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಭಿವ್ಯಕ್ತಿಯ ಸ್ವಾತಂತ್ರ್ಯ ಹಾಗೂ ಧಾರ್ಮಿಕ ನಂಬಿಕೆಗಳ ಗೌರವ ಕುರಿತ ಚರ್ಚೆ ಮತ್ತೊಮ್ಮೆ ಪ್ರಸ್ತುತವಾಗಿದೆ.

Leave a Reply

Your email address will not be published. Required fields are marked *