ಪುತ್ತೂರು: ಸಾಕಷ್ಟು ಸಿದ್ಧತೆ ಮತ್ತು ಪರಿಶ್ರಮದಿಂದ ಗ್ರಾಮೀಣ ವಿದ್ಯಾರ್ಥಿಗಳು ಕೂಡ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಐಪಿಎಸ್, ಐಎಎಸ್ ಅಕಾರಿಗಳು ಸಾಧ್ಯವಿದೆ. ಈ ಪರೀಕ್ಷೆ ಬರೆಯಲು ಹೊರಡುವ ಮುನ್ನ ನಾನೇಕೆ ಈ ಕ್ಷೇತ್ರ ಆರಿಸಿಕೊಂಡಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಹಾಗಿದ್ದಲ್ಲಿ ಮಾತ್ರ ಕಠಿಣ ಸವಾಲನ್ನು ಕೊನೆಯರೆಗೂ ಎದುರಿಸಿ ಗೆಲ್ಲಲು ಸಾಧ್ಯ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.


ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಅಕ್ಷಯ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಐಎಎಸ್- ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋರ‍್ಯಾಕ್ಟ್ ಕ್ಲಬ್ ಅಕ್ಷಯ ಕಾಲೇಜು ಮತ್ತು ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಕಾಯಾರ್ಗಾರ ಆಯೋಜಿಸಲಾಗಿತ್ತು.
ಸಿವಿಲ್ ಸರ್ವಿಸ್‌ನಲ್ಲಿ ೨೦ಕ್ಕೂ ಹೆಚ್ಚು ವಿಭಾಗಗಳಲ್ಲಿ ಅವಕಾಶಗಳಿವೆ. ಯುಪಿಎಸ್ ಪರೀಕ್ಷೆಗೆ ಪ್ರತೀ ವರ್ಷ ಸುಮಾರು ೧೦ ಲಕ್ಷ ಮಂದಿ ನೋಂದಣಿ ಮಾಡುತ್ತಾರೆ. ಇವರಲ್ಲಿ ೧೫ ಸಾವಿರ ಮಂದಿ ಪ್ರಾಥಮಿಕ ಹಂತದ ಪರೀಕ್ಷೆ ಉತ್ತೀರ್ಣರಾಗಿ ಮೈನ್ಸ್ಗೆ ಆಯ್ಕೆಯಾಗುತ್ತಾರೆ. ಅದರಲ್ಲೂ ಉತ್ತೀಣರಾದವರು ನಂತರ ಸಂದರ್ಶನದಲ್ಲಿ ಗೆಲ್ಲಬೇಕಾಗುತ್ತದೆ. ಮೈನ್ಸ್ನಲ್ಲಿ ಅನುತ್ತೀರ್ಣಗೊಂಡರೆ ಮುಂದಿನ ವರ್ಷ ಮತ್ತೆ ಪ್ರಿಲಿಮಿನರಿ ಪರೀಕ್ಷೆಯಿಂದಲೇ ಸಾಗಬೇಕಾಗುತ್ತದೆ. ಸಮಾಜದ ಸೇವೆ ಮಾಡಲು, ಉತ್ತಮ ವೃತ್ತಿ ಹೊಂದಲು, ಹೆಸರು, ಕೀರ್ತಿ ಸಂಪಾದಿಸಲು ನಾಗರಿಕ ಸೇವೆ ಒಳ್ಳೆಯ ವೇದಿಕೆ. ಆದರೆ ಗಟ್ಟಿಯಾದ ಕಟಿಬದ್ಧತೆ ಬೇಕು ಎಂದವರು ಹೇಳಿದರು.







ಐ.ಎ.ಎಸ್. ದರ್ಶನ ಸಂಸ್ಥೆಯ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಶಿಕ್ಷಣ, ಉದ್ಯಮದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಲ್ಲಿ ನಾಗರಿಕ ಸೇವಾ ಕ್ಷೇತ್ರಕ್ಕೆ ಹೋಗುವವರ ಸಂಖ್ಯೆ ವಿರಳವಾಗಿದೆ. ಇದಕ್ಕೆ ಇಲ್ಲಿರುವ ಮಾಹಿತಿ ಕೊರತೆಯೇ ಕಾರಣ. ಇದನ್ನು ನೀಗಿಸಲು ಇಂಥ ಕಾರ್ಯಾಗಾರಗಳು ಉಪಯುಕ್ತ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ದರ್ಶನ್ ಗರ್ತಿಕರೆ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನಿತರ ಬಗ್ಗೆ ಹಿರಿಯ ಸಾಹಿತಿ ಡಾ.ಎಚ್.ಜಿ. ಶ್ರೀಧರ್ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ದರ್ಶನ್ ಗರ್ತಿಕೆರೆ ಅವರು ಐಎಎಸ್- ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.


ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್,ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮರಾಜ್, ಅಕ್ಷಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲ್,ಹಿರಿಯ ಸಾಹಿತಿ ಡಾ.ಎಚ್.ಜಿ. ಶ್ರೀಧರ್,
ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ,ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್, ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಉಪಸ್ಥಿತರಿದ್ದರು.

