ಕಡಬ: “ಬ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂಬುದನ್ನು ಅರಿತ ಕಾಂಗ್ರೆಸ್ ಪಕ್ಷ ವಿಬಿಜಿ ರಾಮ್ಜಿ ಯೋಜನೆ ಕುರಿತು ಅಪಪ್ರಚಾರ ನಡೆಸುತ್ತಿದೆ” ಎಂದು ಮಾಜಿ ಸಚಿವ ಹಾಗೂ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಹಾಗೂ ಜನಜಾಗೃತಿಗಾಗಿ ಹೊಸಮಠದಿಂದ ಕಡಬದವರೆಗೆ ಆಯೋಜಿಸಲಾದ ಬೃಹತ್ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಹಿಂದೆ ನಡೆದಿದ್ದ ಭ್ರಷ್ಟಾಚಾರವನ್ನು ಮನಗಂಡು ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಹೊಸ ರೂಪ ನೀಡಲಾಗಿದೆ. ಈಗ ಭ್ರಷ್ಟಾಚಾರಕ್ಕೆ ಅವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ವಿಬಿಜಿ ರಾಮ್ಜಿ ಯೋಜನೆ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿದೆ ಎಂದು ಅವರು ಹೇಳಿದರು.
ಯುಪಿಎ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪಿಸಿದ ಅವರು, ಯೋಜನೆಯ ಹೆಸರನ್ನು ಬದಲಾಯಿಸುವ ವಿಷಯದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದರು. “ಯೋಜನೆಯಿಂದ ದುಡಿಯುವವರಿಗೆ ಅನ್ಯಾಯವಾಗಿಲ್ಲ. ಆದರೆ ಕೇಂದ್ರದ ಹಣವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಕಡಿವಾಣ ಹಾಕಲಾಗಿದೆ” ಎಂದು ಹೇಳಿದರು.





ಯೋಜನೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶೇ.40 ಹಣವನ್ನು ನೀಡಬೇಕಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಬಿಜೆಪಿ ವಿರುದ್ಧ ಸುಳ್ಳಿನ ಮೆರವಣಿಗೆ ನಡೆಸಿ ತಪ್ಪು ಸಂದೇಶ ಹರಡಲಾಗುತ್ತಿದೆ ಎಂದು ಆರೋಪಿಸಿದರು.
“ಪ್ರಧಾನಮಂತ್ರಿ Narendra Modi ನೇತೃತ್ವದಲ್ಲಿ ಕೇಂದ್ರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಅದರಿಂದಲೇ ಕಾಂಗ್ರೆಸ್ ಅಪಪ್ರಚಾರಕ್ಕೆ ಇಳಿದಿದೆ” ಎಂದು ಹೇಳಿದರು. “ನಮ್ಮ ಪಕ್ಷ ಗಾಂಧಿಯನ್ನು ಕೈಬಿಟ್ಟಿಲ್ಲ. ಪಕ್ಷದ ಪಂಚತಂತ್ರ, ಪಂಚಸೂತ್ರಗಳಲ್ಲಿ ಗಾಂಧಿಯ ಚಿಂತನೆ ಅಳವಡಿಸಿಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕಾಂಗ್ರೆಸ್ ಅಮಾಯಕ ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಹಿಂದೆ 100 ದಿನಗಳಿದ್ದ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ₹175 ಇದ್ದ ಕೂಲಿಯನ್ನು ₹375ಕ್ಕೆ ಏರಿಸಲಾಗಿದೆ ಎಂದು ಹೇಳಿದರು. ಗ್ರಾಮಕ್ಕೆ ಜೀವ ತುಂಬುವ ಶಕ್ತಿಯನ್ನು ನೀಡುವ ಅರ್ಥದಲ್ಲಿ ವಿಬಿಜಿ ರಾಮ್ಜಿ ಎಂಬ ಹೆಸರಿಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಭಾರಿ ಪ್ರಸನ್ನ ಕುಮಾರ್ ಮಾರ್ತ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.



