ಬೆಂಗಳೂರು: ದೇಶದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.

ಬೆಂಗಳೂರು ಮೂಲದ ವಕೀಲ ಸೋಮಶೇಖರ್ ರಾಜವಂಶಿ ಅವರು ಅರ್ಜಿ ಸಲ್ಲಿಸಿದ್ದು, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ರಾಜ್ಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ಅರ್ಜಿಯಲ್ಲಿ, ಶಾಲೆಗಳಲ್ಲಿ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯಗೊಳಿಸುವುದು ಸಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗುತ್ತದೆ ಎಂಬ ವಾದವನ್ನು ಮುಂದಿರಿಸಲಾಗಿದೆ ಎಂದು ತಿಳಿದುಬಂದಿದೆ. ವಿಷಯವು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂಬ ಅಂಶವನ್ನು ಅರ್ಜಿದಾರರು ಒತ್ತಿ ಹೇಳಿದ್ದಾರೆ.
ಈ ಅರ್ಜಿ ಶೀಘ್ರದಲ್ಲೇ ಮುಖ್ಯ ನ್ಯಾಯಮೂರ್ತಿ ವಿಭೂ ಬಕ್ರು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ವಿಚಾರಣೆಯ ಬಳಿಕ ನ್ಯಾಯಾಲಯದ ಆದೇಶದ ಮೇಲೆ ಮುಂದಿನ ಕ್ರಮ ಸ್ಪಷ್ಟವಾಗಲಿದೆ.

Leave a Reply

Your email address will not be published. Required fields are marked *