ಬೆಂಗಳೂರು: ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಆಡಿಟ್ ವರದಿ ಸಿದ್ಧಗೊಂಡಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.




ಕಳೆದ ಬಾರಿ 5% ಮೆಟ್ರೋ ದರ ಪರಿಷ್ಕರಣೆ ಆಗಿತ್ತು. ಇದೀಗ ಬಜೆಟ್ ವೆಚ್ಚಗಳ ಹೆಚ್ಚಳದ ಹಿನ್ನೆಲೆ ಮತ್ತೊಮ್ಮೆ ದರ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವತಿಯಿಂದ ಆಡಿಟ್ ನಡೆಸಲಾಗಿದ್ದು, ಮೆಟ್ರೋ ನಿರ್ವಹಣೆ, ಬಜೆಟ್ ವೆಚ್ಚ, ಸಿಬಂದಿ ಸಂಬಳ ಹಾಗೂ ಇಂಧನ ವೆಚ್ಚಗಳ ಏರಿಕೆಯನ್ನು ಪರಿಗಣಿಸಿ ವರದಿ ಸಿದ್ಧಪಡಿಸಲಾಗಿದೆ.


ಆಡಿಟ್ ವರದಿ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಕೆಯಾಗಿದೆ ಎನ್ನಲಾಗಿದೆ. ವರದಿ ಆಧಾರದಲ್ಲಿ ಸರ್ಕಾರ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ನಿಗದಿಯಾಗಿದ್ದ 5% ದರದಲ್ಲೇ 1% ಅಥವಾ 2% ಹೆಚ್ಚಳ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಜನಸಾಮಾನ್ಯರ ಮೇಲೆ ಹೆಚ್ಚಿನ ಭಾರ ಬಾರದಂತೆ ಕ್ರಮ ಕೈಗೊಳ್ಳಲು ಸರ್ಕಾರ ಯೋಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.



