ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘಕ್ಕೆ 50 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ, ಕರ್ನಾಟಕ ರಾಜ್ಯ ಮೊಗೇರ ಸಂಘದ ನೇತೃತ್ವದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಎರಡು ದಿನಗಳ ಕಾಲ ಸುಳ್ಯದಲ್ಲಿ ‘ಮೊಗೇರ ದುಡಿ ಆಯನ–2026’ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ನಂದರಾಜ ಸಂಕೇಶ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.




ಸಮುದಾಯದ ಸಾಂಸ್ಕೃತಿಕ ಪರಂಪರೆಗೆ ಗಣನೀಯ ಕೊಡುಗೆ ನೀಡುತ್ತಾ ಬಂದಿರುವ ಮೊಗೇರ ಸಮಾಜದ ಹೋರಾಟದ ಪರಂಪರೆ, ಕಥೆ-ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಲವಾಗಿ ಕಟ್ಟಿ ಬೆಳೆಸುವ ಉದ್ದೇಶದಿಂದ ಈ ಬೃಹತ್ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಕರ್ನಾಟಕದ ಏಳು ಜಿಲ್ಲೆಗಳಲ್ಲಿರುವ ಮೊಗೇರ ಸಮಾಜವನ್ನು ತಳಮಟ್ಟದಿಂದ ಸಂಘಟಿಸಿ, ವಿಶಾಲ ತಳಹದಿಯಲ್ಲಿ ವಿಸ್ತರಿಸುವುದು ಸಮ್ಮೇಳನದ ಪ್ರಮುಖ ಗುರಿಯಾಗಿದೆ ಎಂದರು.


ಸುಳ್ಯದ ಕೊಡಿಯಾಲ್ ಬೈಲ್‌ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಲಿರುವ ಈ ಐತಿಹಾಸಿಕ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆಬ್ರವರಿ 28 ರಂದು ಜಿಲ್ಲಾ ಮೊಗೇರ ಸಂಘದ ಸ್ಥಾಪಕರಲ್ಲಿ ಓರ್ವರಾದ ಗಣಪ ಕೆ. ಮೂಡುಶೆತ್ವ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶುಭೋದಯ ಕೂಡ್ಲು ಅವರು ‘ದುಡಿ ಆಯನ–2026’ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳು ವಿವಿಧ ಕಲಾಸಗಳಲ್ಲಿ ಭಾಗವಹಿಸಲಿದ್ದಾರೆ. ಮೊಗೇರ ಸಮಾಜದ ಸಾಂಸ್ಕೃತಿಕ ಪರಂಪರೆಯಾದ ದುಡಿ ಕುಣಿತ, ವಿವಿಧ ಜನಪದ ನೃತ್ಯಗಳು, ಕ್ರೀಡೆಗಳು, ಆಟೋಟಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 1ರಂದು ಸುಳ್ಯದ ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ರಾಜಕೀಯ, ಧಾರ್ಮಿಕ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 7,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ, ಮೊಗೇರ ಸಮಾಜ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಂದರ ಕೇಪುಳು, ಚಂದ್ರಬಿರೀಗ, ಖಜಾಂಚಿ ಬಿ. ರಾಘವ, ಪ್ರಧಾನ ಕಾರ್ಯದರ್ಶಿ ಮುಕೇಶ್ ಕೆಮ್ಮಿಂಜೆ, ಮಹಿಳಾ ಸಂಘದ ಅಧ್ಯಕ್ಷೆ ಸುಮಿತಿ ಸರ್ವೆ ಹಾಗೂ ಮಮತಾ ಉಪಸ್ಥಿತರಿದ್ದರು.



