ಕಡಬ, ಫೆ.25: ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ತನ್ನದೇ ಆದ ವಿಶಿಷ್ಟ ಹಾಸ್ಯ ಶೈಲಿಯಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಯಕ್ಷ ಬಳ್ಳಿ ಕಡಬ ದಿನೇಶ್ ರೈ ಅವರ ಕಲಾ ಜೀವನದ 25ನೇ ವರ್ಷದ ಸಂಭ್ರಮಾಚರಣೆ ‘ಬೊಳ್ಳಿ ಪರ್ಬ–25’ ಫೆಬ್ರವರಿ 25ರಂದು ಬುಧವಾರ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.




ಐತೂರು ಗ್ರಾಮದ ಬೆತ್ತೋಡಿ ನಿವಾಸಿಗಳಾದ ಮಾಳ ವರದ ರೈ ಮತ್ತು ವಾರಿಜ ರೈ ದಂಪತಿಗಳ ಪುತ್ರ ದಿನೇಶ್ ರೈ, ಒಂಬತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಕಲೆಯತ್ತ ಮುಖಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಾರಾನಾಥ ಬಾಲಕಾಯ ವರ್ಕಾಡಿ ಅವರ ಶಿಷ್ಯತ್ವದಲ್ಲಿ ನಾಟ್ಯಾಭ್ಯಾಸ ಮುಗಿಸಿ ಧರ್ಮಸ್ಥಳ ಮೇಳದ ಮೂಲಕ ರಂಗಪ್ರವೇಶ ಮಾಡಿದ ಅವರು, ಬಳಿಕ ಕಟೀಲು, ಪುತ್ತೂರು, ಕುಂಟಾರು, ಮಂಗಳದೇವಿ ಮೊದಲಾದ ಪ್ರತಿಷ್ಠಿತ ಮೇಳಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಗೆಜ್ಜೆಗಿರಿ ಮೇಳದ ಆಕರ್ಷಕ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.



ರವಿ ಕುಮಾರ್ ಸುರತ್ಕಲ್ ಅವರ ನಾಗತಂಬಿಲದ ‘ಕೂಸಮ್ಮ’ ಪಾತ್ರವು ಇವರ ಕಲಾ ಜೀವನಕ್ಕೆ ಹೊಸ ಆಯಾಮ ತಂದಿತು. ನಾಗರಪಂಚಮಿಯ ನೋಣಯ್ಯ, ವಜ್ರ ಕುಟುಂಬದ ಕಟಪ ಸ್ವಾಮೀಜಿ, ಪವಿತ್ರ–ಪಲ್ಲವಿಯ ಪದ್ದು ಹಾಗೂ ಜೀವನ ಚಕ್ರದ ನಿಷ್ಠಾವಂತ ಸೇವಕರಂತಹ ಪಾತ್ರಗಳು ಪ್ರೇಕ್ಷಕರ ಮನ ಗೆದ್ದಿವೆ. ಯಕ್ಷಗಾನ ಮಾತ್ರವಲ್ಲದೆ ಸಿನಿಮಾ, ಧಾರಾವಾಹಿ ಹಾಗೂ ‘ಬಲೆ ತೆಳಿಪಾಳೆ’ ಮುಂತಾದ ಕಾಮಿಡಿ ಶೋಗಳ ಮೂಲಕವೂ ದಿನೇಶ್ ರೈ ಮನೆಮಾತಾಗಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಹಾಗೂ ನಮ್ಮ ತುಳುನಾಡ್ ಟ್ರಸ್ಟ್ ಕಾರ್ಯಧ್ಯಕ್ಷರಾಗಿ ತುಳು ಭಾಷೆ ಮತ್ತು ಲಿಪಿಯ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ‘ಯಕ್ಷರಕ್ಷ ಪ್ರಶಸ್ತಿ’, ‘ಕರ್ನಾಟಕ ಯುವರತ್ನ’ ಸೇರಿದಂತೆ 2025ರ ‘ಕರ್ನಾಟಕ ಸೇವರತ್ನ’ ಪ್ರಶಸ್ತಿಯೂ ದೊರೆತಿದೆ. ದೇಶ-ವಿದೇಶಗಳಲ್ಲಿ ನೂರಾರು ಸನ್ಮಾನಗಳು ಇವರಿಗೆ ಸಂದಿವೆ.


ಕಾರ್ಯಕ್ರಮದ ವೇಳಾಪಟ್ಟಿ:
ಬೆಳಗ್ಗೆ 8 ಗಂಟೆಗೆ ಚಂಡಿಕಾಯಾಗ ಮತ್ತು ಸಪ್ತಶತಿ ಪಾರಾಯಣ
ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಸಮಾರಂಭ (ದಿವಂಗತ ಲೀಲಾವತಿ ಬೈಪಡಿತಾಯ ವೇದಿಕೆ)
ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ಖ್ಯಾತ ಕಲಾವಿದರಿಂದ ‘ಯಕ್ಷಹಾಸ್ಯ ವೈಭವ’
ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮ, ಗುರುವಂದನೆ ಹಾಗೂ ಸನ್ಮಾನ
ರಾತ್ರಿ 7:30ಕ್ಕೆ ಗೆಜ್ಜೆಗಿರಿ ಮೇಳದವರಿಂದ ಭವ್ಯ ತುಳು ಯಕ್ಷಗಾನ ಬಯಲಾಟ
ಯಕ್ಷರಂಗದ ಹಾಸ್ಯ ಮಾಂತ್ರಿಕನಾದ ದಿನೇಶ್ ರೈ ಅವರ 25ನೇ ವರ್ಷದ ಕಲಾ ಸಂಭ್ರಮಕ್ಕೆ ಅಭಿಮಾನಿಗಳು ಹಾಗೂ ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
