ಪುತ್ತೂರು: ಕಳೆದ ಮೂರು ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಪುತ್ತೂರು ಗಾಣಿಗರ ಯಾನೆ ಸಪಲಿಗರ ಸಂಘದ ಆಶ್ರಯದಲ್ಲಿ ಮಾರ್ಚ್ 1ರಂದು ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ಅಂತರ್ ಜಿಲ್ಲಾ ಗಾಣಿಗರ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಹಾಗೂ ಸಂಘದ ಕಿರಣ್ ಕುಮಾರ್ ಸಪಲ್ಯ ಮುಂಬೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.




ಗಾಣಿಗ ಸಮುದಾಯದಲ್ಲಿ ಸಂಘಟನೆಯ ಕೊರತೆ ಇರುವ ಹಿನ್ನೆಲೆಯಲ್ಲಿ ಸಮಾಜವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ಸಂಗಮವನ್ನು ಹಮ್ಮಿಕೊಳ್ಳಲಾಗಿದೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ನೆರವು ನೀಡುವುದು, ಸರ್ಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ವಿದ್ಯಾಭ್ಯಾಸದ ಮಹತ್ವ ತಿಳಿಸುವುದು ಸಂಘದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ನೆರವೇರಿಸಲಿದ್ದು ಪ್ರಧಾನ ಭಾಷಣ ಮಾಡಲಿದ್ದಾರೆ.


ಇದೇ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಸಂಸದ ಕ್ಯಾ.ಬ್ರಿಜೇಶ್ ಚೌಟ ,ಶಾಸಕರಾದ ಅಶೋಕ್ ರೈ, ಕಿಶೋರ್ ಕುಮಾರ್ ಬೊಟ್ಯಾಡಿ, ಯಶಪಾಲ್ ಸುವರ್ಣ, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ಎಂ.ಆರ್. ರಾಜಶೇಖರ್ ಗಾಣಿಗ, ರಾಜ್ಯ ಗಾಣಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಗಾಣಿಗರ ಪ್ರಥಮ ಜಿಲ್ಲಾ ಮಟ್ಟದ ಸಂಗಮ;
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಗಾಣಿಗರನ್ನು ಒಟ್ಟುಗೂಡಿಸುವ ಪ್ರಥಮ ಪ್ರಯತ್ನ ಇದಾಗಿದೆ. ಕಾರ್ಯಕ್ರಮದಲ್ಲಿ ಸಮಾಜದ ಸಾಧಕರನ್ನು ಹಾಗೂ ಪಾರಂಪರಿಕ ಕೊಂಬು-ಚೆಂಡೆ ವಾದಕರನ್ನು ಸನ್ಮಾನಿಸಲಾಗುವುದು. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪುತ್ತೂರಿನ ಗಾಣಿಗ ಸಮುದಾಯದ ಯುವಕ-ಯುವತಿಯರಿಗೆ ವಧು-ವರ ಅನ್ವೇಷಣಾ ನೋಂದಣಿ ವ್ಯವಸ್ಥೆಯೂ ಇರಲಿದೆ.

ಬೆಳಿಗ್ಗೆ 9ರಿಂದ 10ರವರೆಗೆ ಸಭಾಂಗಣಕ್ಕೆ ಆಗಮಿಸುವ 20 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸೀರೆ ವಿತರಣೆ ಕಾರ್ಯಕ್ರಮವೂ ನಡೆಯಲಿದೆ.
“ಡ್ಯಾನ್ಸ್ ಗಾಣಿಗ ಡ್ಯಾನ್ಸ್” ಸ್ಪರ್ಧೆ;
ಸಮಾಜದವರಿಗಾಗಿ “ಡ್ಯಾನ್ಸ್ ಗಾಣಿಗ ಡ್ಯಾನ್ಸ್” ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೆಮಿ ಕ್ಲಾಸಿಕಲ್, ಜಾನಪದ ಹಾಗೂ ಸಂಸ್ಕಾರಯುತ ಚಲನಚಿತ್ರ ಗೀತೆಗಳ ನೃತ್ಯಗಳಿಗೆ ಮಾತ್ರ ಅವಕಾಶ. ವಿಜೇತರಿಗೆ ರೂ.10,000 ಪ್ರಥಮ ಬಹುಮಾನ, ರೂ.5,000 ದ್ವಿತೀಯ, ರೂ.3,000 ತೃತೀಯ ಬಹುಮಾನ ಹಾಗೂ “ಗಾಣಿಗ ಟ್ರೋಫಿ” ಪ್ರದಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂದೀಪ್ ನೆಲ್ಲಿಕಟ್ಟೆ, ಪ್ರದೀಪ್ ಬೊಳುವಾರು ಹಾಗೂ ಹೇಮಚಂದ್ರ ಬೊಳುವಾರು ಉಪಸ್ಥಿತರಿದ್ದರು.
