ಪುತ್ತೂರು: ತುಳು ಭಾಷೆಯಲ್ಲಿ ‘ಬಿರ್ದ್ದ ಕಂಬುಲ’ ಹಾಗೂ ಕನ್ನಡದಲ್ಲಿ ‘ವೀರ ಕಂಬಳ’ ಎಂಬ ಹೆಸರಿನಲ್ಲಿ ನಿರ್ಮಾಣವಾದ ಬಹು ನಿರೀಕ್ಷಿತ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.



ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್, ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ ಹಾಗೂ ನಟ ಶಿವಧೂತ ಗುಳಿಗ, ಜೊತೆಗೆ ಕಾಂತಾರ ಚಿತ್ರದ ಖ್ಯಾತಿಯ ಸ್ವರಾಜ್ ಶೆಟ್ಟಿ ಮಾತನಾಡಿ, ತುಳುನಾಡಿನ ಪರಂಪರೆಯ ಕಂಬಳ ಕ್ರೀಡೆಯನ್ನು ದೇಶ-ವಿದೇಶಗಳಲ್ಲಿ ಪಸರಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.




ಚಿತ್ರದ ಚಿತ್ರೀಕರಣವನ್ನು ದುಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಸಲಾಗಿದ್ದು, ಅವಳಿ ವೀರಪುರುಷರಾದ ಕೋಟಿ ಚೆನ್ನಯ್ಯ ರ ತಾಯಿಯ ಸ್ಥಾನವೆಂದೇ ಖ್ಯಾತಿ ಪಡೆದ ಶ್ರೀ ಕ್ಷೇತ್ರ ಗಜ್ಜೆಗೆರಿ ಯಲ್ಲಿಯೂ ಭಾಗಶಃ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಕಂಬಳದ ಜಾತ್ರೆಯ ವೈಭವ, ಕಂಬಳ ನಿಂತುಹೋದ ಸಂದರ್ಭದ ಹೋರಾಟ ಹಾಗೂ ಕಂಬಳದ ಗೆಲುವಿನ ಸಂಭ್ರಮವನ್ನು ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರಿಸಲಾಗಿದೆ. “ಕಂಬಳದಲ್ಲಿ ಕೋಣಗಳನ್ನು ಓಡಿಸುವ ಪ್ರತಿಯೊಬ್ಬರೂ ನಾಯಕರು” ಎಂಬ ಸಂದೇಶ ಚಿತ್ರದಲ್ಲಿ ಮೂಡಿಬಂದಿದೆ. ಕಂಬಳದ ಗುಣಪಾಲ ಕಡಂಬ, ರಾಜೇಶ್ ಶೆಟ್ಟಿ, ವಿಜಯ ಕುಮಾರ್ ಕೋಡಿಯಾಲ್ ಬೈಲ್ ಅವರ ಸಹಕಾರವೂ ಚಿತ್ರಕ್ಕೆ ಲಭಿಸಿದೆ.


ತುಳು ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ತುಳುನಾಡಿನ ಮಣ್ಣಿನ ಸೊಗಡಿನ ಕಥೆ ಇದೆ. ಮೊದಲು ತುಳುನಾಡಿನ ಜನರು ಸಿನಿಮಾವನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಚಿತ್ರತಂಡ ಮನವಿ ಮಾಡಿತು.
ಚಿತ್ರದಲ್ಲಿ ಐದು ಹಾಡುಗಳಿದ್ದು, ಆದಿತ್ಯ, ರಾಧಿಕಾ ಚೇತನ್, ನವೀನ್ ಡಿ. ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು, ಉಷಾ ಭಂಡಾರಿ, ವೀಣಾ ಪೊನ್ನಪ್ಪ, ಗೀತಾ ಸುರತ್ಕಲ್, ಸುಂದರ ರೈ ಮಂದಾರ, ಸ್ವರಾಜ್ ಶೆಟ್ಟಿ, ದಿವ್ಯ, ಶ್ರೀನಿವಾಸ ಗೌಡ, ಸುರೇಶ್ ಶೆಟ್ಟಿ, ಚೇತನ್ ರೈ ಮಾಣಿ, ಯುವ ಶೆಟ್ಟಿ, ಮೈಮ್ ರಮೇಶ್, ಪ್ರಕಾಶ್ ರೈ, ರವಿಶಂಕರ್, ಶೋಬರಾಜ್ ಹಾಗೂ ಸಂತೋಷ್ ಶೆಟ್ಟಿ ಅಭಿನಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಟ ಸುಂದರ ರೈ ಮಂದಾರ ಹಾಗೂ ಪುತ್ತೂರಿನ ಚಿತ್ರದ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಉಪಸ್ಥಿತರಿದ್ದರು.


