ಪುತ್ತೂರು: ಕರಾವಳಿ ಮೂಲದ ಕರಾಡ ಬ್ರಾಹ್ಮಣ ಸಮಾಜದವರಿಗೆ ಬೆಂಗಳೂರಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ನಿವೇಶನ ಹಂಚಿಕೆ ಮಾಡುವಂತೆ ಶಾಸಕ ಅಶೋಕ್ ರೈ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.



ಬೆಂಗಳೂರು ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಕರಾಡ ಬ್ರಾಹ್ಮಣ ಸಮಾಜದವರು ನೆಲೆಸಿದ್ದು, ಶೃಂಗೇರಿ ಶಾರದಾ ಪೀತಮ್ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಸ್ವಂತ ಸಭಾಂಗಣದ ಕೊರತೆಯಿಂದ ಖಾಸಗಿ ಸ್ಥಳಗಳಿಗೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.



ಈ ಹಿನ್ನೆಲೆಯಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ರ.ಸಂ.32 ನಾಡಪ್ರಭು ಕೆಂಪೇಗೌಡ ಬಡಾವಣೆ, ಬ್ಲಾಕ್-7, ಕೊಮ್ಮಘಟ್ಟ ಗ್ರಾಮದ ನಿವೇಶನ ಸಂ.02 ಅನ್ನು ಸಮಾಜದ ಅನುಕೂಲಕ್ಕಾಗಿ ಹಂಚಿಕೆ ಮಾಡುವಂತೆ 02-05-2025ರಂದು ಅರ್ಜಿ ಸಲ್ಲಿಸಲಾಗಿದ್ದು, ನೋಂದಣಿ ಶುಲ್ಕವನ್ನು ಪಾವತಿಸಿರುವುದಾಗಿ ತಿಳಿಸಲಾಗಿದೆ.
ಮನವಿಯನ್ನು ಉಪಮುಖ್ಯಮಂತ್ರಿ D. K. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ N. A. ಹಾರ್ರಿಸ್ ಅವರಿಗೆ ಸಲ್ಲಿಸಲಾಗಿದೆ.
ಶಾಸಕ ಅಶೋಕ್ ರೈ ಹೇಳಿಕೆ
“ಕರಾಡ ಬ್ರಾಹ್ಮಣ ಸಮಾಜದವರು ನನ್ನನ್ನು ಭೇಟಿ ಮಾಡಿ ಸಮಾಜಕ್ಕೆ ಬೆಂಗಳೂರಿನಲ್ಲಿ ನಿವೇಶನ ಒದಗಿಸುವ ಕುರಿತು ಮನವಿ ಮಾಡಿದ್ದರು. ಈ ಮನವಿಯನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಪ್ರಾಧಿಕಾರದ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ. ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದು, ವಾರದೊಳಗೆ ನಿವೇಶನ ಮಂಜೂರಾತಿ ಆದೇಶ ಬರಬಹುದೆಂದು ನಿರೀಕ್ಷೆ ಇದೆ” ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


