ಮಂಗಳೂರು, ಫೆಬ್ರವರಿ 26: ಕುದ್ರೋಳಿಯ ಅಳಕೆ ಭಾಗದ ಶ್ರೇಯಾ ಸ್ವೀಟ್ಸ್ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರ ಮೂಲದ ‘ವೆಕ್ಸನ್’ (Vexon) ಹಾಗೂ ‘ಬಿಎಂಪಿ’ (BMP) ಹೆಸರಿನ ನೆಟ್ವರ್ಕಿಂಗ್ ಸಂಸ್ಥೆಗಳು ಇಂಟರ್ನ್ಶಿಪ್ ಹೆಸರಿನಲ್ಲಿ ನೂರಾರು ಅಮಾಯಕ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.




ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ಮಾತನಾಡಿ, “ಪದವಿ ಓದುತ್ತಿರುವ ಅಥವಾ ಪದವಿ ಪೂರ್ಣಗೊಳಿಸಿರುವ ಯುವಕರಿಗೆ ತಿಂಗಳಿಗೆ ₹30,000 ವೇತನದ ಆಮಿಷವೊಡ್ಡಿ ಈ ಸಂಸ್ಥೆ ಆಹ್ವಾನಿಸುತ್ತಿತ್ತು. ಉದ್ಯೋಗದ ಭರವಸೆ ನೀಡಿದ ಬಳಿಕ ಇಂಟರ್ನ್ಶಿಪ್ ಶುಲ್ಕದ ನೆಪದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ₹51,000 ವಸೂಲಿ ಮಾಡಲಾಗಿದೆ” ಎಂದು ಆರೋಪಿಸಿದರು.


ಕಂಪೆನಿಯ ವ್ಯವಹಾರಗಳನ್ನು ಪ್ರಶ್ನಿಸಿದಾಗ ಸಂಸ್ಥೆಯ ಮೋಸ ಬಯಲಿಗೆ ಬಂದಿದ್ದು, ಐವರು ವಿದ್ಯಾರ್ಥಿಗಳು ಸಾಹಸದಿಂದ ಕಂಪೆನಿಯ ಹಿಡಿತದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು. ಶ್ರೀನಿವಾಸ್ ಯೇನಪೋಯ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಂಸ್ಥೆಯಿಂದ ಮೋಸ ಹೋಗಿರುವುದಾಗಿ ದೂರಿದ್ದಾರೆ.
ನೂರಾರು ವಿದ್ಯಾರ್ಥಿಗಳು ‘ವೆಕ್ಸನ್’ ಮತ್ತು ‘ಬಿಎಂಪಿ’ ಕಂಪೆನಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಚೈನ್ ಲಿಂಕ್ ಮಾದರಿಯ ದಂಧೆಗೆ ಬಲಿಯಾಗಿರುವ ಸಾಧ್ಯತೆ ಇದೆ. ಮಂಗಳೂರಿನಂತಹ ಪ್ರಬುದ್ಧ ನಗರದಲ್ಲಿ ಹೊರರಾಜ್ಯದ ಕಂಪೆನಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಇಂತಹ ಚಟುವಟಿಕೆ ನಡೆಸುತ್ತಿರುವುದು ಆತಂಕಕಾರಿ ಎಂದು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಹೇಳಿದರು. ಈ ಸಂಬಂಧ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎನ್ಎಸ್ಯುಐ ಸಂಘಟನೆಯ ಕ್ರಿಸ್ಟನ್ ಮಿನೆಜಸ್ ಅವರು ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಪ್ರೀತೇಶ್, ಸಿಂಚನ ಹಾಗೂ ಸಿಂಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.

