ಕಡಬ: ಫೆಬ್ರವರಿ–ಮಾರ್ಚ್ 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಅವರು ಸ್ವಯಂ ಪ್ರೇರಿತವಾಗಿ ಅಭಿಯಾನದ ನೇತೃತ್ವ ವಹಿಸಿ ಮಾನವೀಯತೆ ಮೆರೆದರು. ತಮ್ಮ ಪತಿ ಹಾಗೂ ಪೌರಕಾರ್ಮಿಕರ ತಂಡದೊಂದಿಗೆ ಕಾಲೇಜು ಆವರಣವನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ವಾತಾವರಣ ಸೃಷ್ಟಿಸಲು ಮುಂದಾದರು.

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಗತಿ ಕೊಠಡಿಗಳು, ಪರೀಕ್ಷಾ ಹಾಲ್ ಹಾಗೂ ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿಯನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಯಿತು. ‘ಸ್ವಚ್ಛತೆಯೇ ಸೇವೆ’ ಎಂಬ ಮಂತ್ರದೊಂದಿಗೆ ನಡೆದ ಈ ಕಾರ್ಯಕ್ಕೆ ಕಾಲೇಜು ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿತು.

ಪರೀಕ್ಷಾ ಕೇಂದ್ರದಲ್ಲಿ ಈ ರೀತಿಯ ಸೇವಾ ಮನೋಭಾವದಿಂದ ಕೈಗೊಂಡ ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯರು ಹಾಗೂ ಪೋಷಕರ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *