ಪುತ್ತೂರು: ಗಾಣಿಗ ಸಮಾಜದಿಂದ ವಿಶ್ವದಲ್ಲಿಯೇ ಭಾರತದ ಹೆಸರು ಚಿರಸ್ಥಾಯಿಯಾಗಿದೆ ಎಂದು ಪ್ರಹ್ಲಾದ್ ದಾಮೋದರದಾಸ್ ಮೋದಿ ಅಭಿಪ್ರಾಯಪಟ್ಟರು. ದೇಶದಲ್ಲಿ ಗಾಣಿಗ ಸಮಾಜದ ಮಗನಿಂದ ದೊಡ್ಡ ಬದಲಾವಣೆ ಉಂಟಾಗಿದ್ದು, ಭ್ರಷ್ಟಾಚಾರ ನಿರ್ಮೂಲನೆಯಾಗಿದೆ. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಮೂಲಕ ಭಾರತವನ್ನು ವಿಶ್ವವೇ ಗುರುತಿಸುವಂತಾಗಿದೆ. ನಾವು ಸಂಘಟಿತರಾದರೆ ರಾಜಕೀಯ ಪಕ್ಷಗಳೇ ನಮ್ಮ ಮನೆ ಬಾಗಿಲು ತಟ್ಟುತ್ತವೆ. ಆದರೆ ಪ್ರಸ್ತುತ ನಾವೇ ರಾಜಕೀಯ ಪಕ್ಷಗಳ ಬಾಗಿಲು ತಟ್ಟುವಂತಾಗಿದೆ ಎಂದು ಅವರು ಹೇಳಿದರು.

ಭಾನುವಾರ ಪುತ್ತೂರು ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದಾದ್ಯಂತ 14 ಕೋಟಿ ಗಾಣಿಗ ಸಮಾಜದವರು ಇದ್ದರೂ ನಾವು ಸಂಘಟಿತರಾಗಿಲ್ಲ ಎಂಬುದು ಕಟು ಸತ್ಯ ಎಂದು ಹೇಳಿದರು.

ರಾಮಾಯಣದಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮದವರೆಗೆ ಗಾಣಿಗರ ಕೊಡುಗೆ ಇದ್ದು, ಇಂದು ನಮ್ಮ ಇತಿಹಾಸವನ್ನು ಮರೆತಿದ್ದೇವೆ. ಮೊಬೈಲ್ ಮೋಹಿತ ಬದುಕಿನಲ್ಲಿ ಸಂಸ್ಕಾರ ಕಡೆಗಣನೆಯಾಗುತ್ತಿದೆ. ಗಾಣಿಗ ಸಮಾಜದ ಹೆಸರು ವಿಶ್ವಮಾನ್ಯವಾಗಿದ್ದು, ಅದನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನತೆ ಹೆಚ್ಚು ಉದ್ಯಮ ಕ್ಷೇತ್ರಕ್ಕೆ ಬರಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಒಬ್ಬ ವ್ಯಕ್ತಿಯದ್ದಲ್ಲ, ಇಡೀ ದೇಶದ ಸಂಕಲ್ಪವಾಗಿದೆ. ಜಿಲ್ಲೆಯ ಸಂಸ್ಕೃತಿಗೆ ಅನುಗುಣವಾಗಿ ವಿಕಸಿತ ಭಾರತದತ್ತ ಹೆಜ್ಜೆ ಹಾಕಲು ಒಗ್ಗಟ್ಟು ಅಗತ್ಯ ಎಂದು ಹೇಳಿದರು.

ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಗಾಣಿಗ ಸಮಾಜದ ಅಭಿವೃದ್ಧಿಗೆ ವಿದ್ಯೆಗೆ ಆದ್ಯತೆ ನೀಡಬೇಕು. ಸಹಾಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಯೋಜನೆಗಳು ಸಾಕಾರಗೊಳ್ಳುತ್ತವೆ. ಗಾಣಿಗ ಅಭಿವೃದ್ಧಿ ನಿಗಮಕ್ಕೆ ಶಕ್ತಿ ತುಂಬುವ ಕೆಲಸವಾದರೆ ಅಭಿವೃದ್ಧಿಯ ಹಂತಕ್ಕೇರಬಹುದು. ಪುತ್ತೂರಿನಲ್ಲಿ ಗಾಣಿಗ ಸಭಾಭವನ ನಿರ್ಮಾಣಕ್ಕೆ ಪಹಣಿಪತ್ರ ಸಹಿತ ಜಾಗ ಹುಡುಕಿಕೊಟ್ಟರೆ ಮುಖ್ಯಮಂತ್ರಿಯಿಂದ ಅನುಮೋದನೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಮಹಿಳೆಯರಿಗೆ ಸೀರೆ ವಿತರಣೆ ನಡೆಯಿತು. ವಧು-ವರರ ಅನ್ವೇಷಣೆಯ ನೋಂದಾವಣೆ ಹಾಗೂ “ಡ್ಯಾನ್ಸ್ ಗಾಣಿಗ ಡ್ಯಾನ್ಸ್” ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ ವಹಿಸಿದ್ದರು. ವೇದಿಕೆಯಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮುಂಬೈ ಸಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಫಲ್ಯ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಉದ್ಯಮಿ ವಸಂತ ಜಿ ಸಪಲ್ಯ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *