ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿಯಿಂದಾಗಿ ಉಂಟಾದ ಉದ್ವಿಗ್ನ ಸ್ಥಿತಿಯಿಂದ ಕಳವಳಗೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿ ಕುರಿತು ಕೆಲವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.
‘ನಾವಿರುವ ಪ್ರದೇಶದಿಂದ ಸುಮಾರು 35 ಕಿ.ಮೀ ದೂರದ ಉದೇದ್‌ನಲ್ಲಿ ಅಮೆರಿಕದ ಸೇನಾ ನೆಲೆ ಇದೆ. ಅದನ್ನು ಗುರಿಯಾಗಿಸಿ ಹೆಚ್ಚು ಕ್ಷಿಪಣಿ ಹಾಗೂ ಡೋನ್ ದಾಳಿಗಳು ನಡೆದಿವೆ. ಆ ಸೇನಾ ನೆಲೆಯಲ್ಲಿ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದೆ. ಕ್ಷಿಪಣಿ ಹಾಗೂ ಡೋನ್‌ಗಳನ್ನು ಹೊಡೆದುರುಳಿಸುವ ದೃಶ್ಯಗಳನ್ನು ಎರಡು ದಿನಗಳಿಂದ ನೋಡುತ್ತಿದ್ದೇವೆ. ಅಲ್ಲಲ್ಲಿ ಹೊಗೆಯಾವರಿಸಿದ ದೃಶ್ಯಗಳು ಕಿಟಕಿ ಮೂಲಕ ಕಾಣಿಸುತ್ತಿವೆ. ಅರ್ಜೆಂಟೀನಾದವರ ಶಿಬಿರವೊಂದರ ಬಳಿ ಕ್ಷಿಪಣಿಯ ಅವಶೇಷ ಬಿದ್ದು 16 ಮಂದಿ ಗಾಯಗೊಂಡಿದ್ದಾರೆ. ನಾವಿರುವ ಪ್ರದೇಶದಲ್ಲಿ ಯಾವುದೇ ಸಾವು ನೋವಾಗಿಲ್ಲ’ ಎಂದು ಕತಾರ್‌ನ ದೋಹಾ ಸಮೀಪದ ವುಕೈರ್ ಎಝಾನ್‌ನಲ್ಲಿ ನೆಲೆಸಿರುವ ಉಜಿರೆಯ ಯಾಹ್ಯಾ ಅಬ್ಬಾಸ್ ತಿಳಿಸಿದರು.





‘ಸಾಧ್ಯವಾದಷ್ಟು ಮನೆಯ ಒಳಗಡೆಯೇ ಇರಬೇಕು. ಹೊರಗಡೆ ಸುಖಾಸುಮ್ಮನೆ ಅಡ್ಡಾಡಬಾರದು. ಕಿಟಕಿ, ಬಾಗಿಲುಗಳಿಂದ ದೂರವೇ ಇರಿ ಎಂದು ಇಲ್ಲಿನ ಸರ್ಕಾರ ಸೂಚನೆ ನೀಡಿದೆ. ಅಪಾಯದ ಮುನ್ಸೂಚನೆ ಸಿಕ್ಕಾಗ ಸಮೀಪದ ಸುರಕ್ಷಿತ ನೆಲೆಗಳಲ್ಲಿ ಆಶ್ರಯಪಡೆಯಿರಿ ಎಂದು ನಿರ್ದೇಶನ ನೀಡಿದೆ’ ಎಂದರು.
‘ಇಲ್ಲಿ ಕಚೇರಿಗಳು ಮುಚ್ಚಿದ್ದು, ಕಾರ್ಮಿಕರಿಗೆ ರಜೆ ನೀಡಲಾಗಿದೆ. ಆದರೆ, ಆಸ್ಪತ್ರೆಗಳು, ಸೂಪರ್ ಮಾರುಕಟ್ಟೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿವೆ. ಸೂಪರ್ ಮಾರುಕಟ್ಟೆಗಳಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಶಾಲಾ ಕಾಲೇಜುಗಳು ಮುಚ್ಚಿದ್ದು, ಪರೀಕ್ಷೆ ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವುದಾಗಿ ತಿಳಿಸಲಾಗಿದೆ’ ಎಂದರು.



