ಉಪ್ಪಿನಂಗಡಿ/ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಗಳ ಮೇಲೆ ಪೊಲೀಸರು ದಾಳಿ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿರುವ ಘಟನೆಗಳು ವರದಿಯಾಗಿವೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಣಿಕ್ಕಳದಲ್ಲಿ ದಾಳಿ – ಮೂವರು ಬಂಧನ;

ಮಾರ್ಚ್ 3 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುತೇಶ್ ಕೆ.ಪಿ ಅವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲ್ ಕರ್ತವ್ಯದಲ್ಲಿದ್ದಾಗ ಬಜತ್ತೂರು ಗ್ರಾಮದ ಮಣಿಕ್ಕಳ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಜೋರಾಗಿ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವುದು ಪತ್ತೆಯಾಯಿತು.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಅಲ್ಲಿದ್ದ ಹಲವರು ಪರಾರಿಯಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಬಂಧಿತರು ಕಡಬ ನಿವಾಸಿ ಸತೀಶ್ (38), ಬಂಟ್ವಾಳ ನಿವಾಸಿ ಮುರಳಿ (30) ಮತ್ತು ಪುತ್ತೂರು ನಿವಾಸಿ ಮೋನಪ್ಪ ಕೆ (36) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ದೇರಣ್ಣ ಮತ್ತು ಉಮೇಶ್ ಎಂಬವರು ಕೋಳಿ ಅಂಕ ನಡೆಸುತ್ತಿರುವುದು ತಿಳಿದುಬಂದಿದೆ.

ಸ್ಥಳದಿಂದ ಐದು ಹುಂಜ ಕೋಳಿಗಳು, ಎರಡು ಬಾಲುಗಳು (ಕತ್ತಿಗಳು), ಪಣವಾಗಿ ಇಡಲಾಗಿದ್ದ ರೂ.2,300 ನಗದು ಹಾಗೂ ಒಂದು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.32/2026ರಲ್ಲಿ ಕೆ.ಪಿ.ಅಕ್ಟ್ 87, 93 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 11(1)(m)(ii), 11(1)(n) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಕೀನ್ಯಾಜೆಯಲ್ಲಿ ದಾಳಿ – ಏಳು ಮಂದಿ ವಶಕ್ಕೆ
ಇನ್ನೊಂದು ಪ್ರಕರಣದಲ್ಲಿ ಮಾರ್ಚ್ 4ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೀನ್ಯಾಜೆ ಪ್ರದೇಶದ ಸರ್ಕಾರಿ ಜಾಗದಲ್ಲಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸಮರ್ಥ ಆರ್. ಗಾಣಿಗೇರ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು.
ಪೊಲೀಸರು ತಲುಪುತ್ತಿದ್ದಂತೆ ಕೆಲವರು ಪರಾರಿಯಾಗಿದ್ದು, ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಹರಿಶ್ಚಂದ್ರ (32), ರಮೇಶ್ ಕುಲಾಲ್ (46), ಸುಧಾಕರ (30), ಅಶೋಕ ಮಲೆಕುಡಿಯ (40), ಪುಷ್ಪರಾಜ್ (25), ಶ್ರೀಧರ ಕುಂಬಾರ (48) ಹಾಗೂ ಚೆನ್ನಪ್ಪ ಗೌಡ (70) ಎಂದು ಗುರುತಿಸಲಾಗಿದೆ.
ಸ್ಥಳದಿಂದ ಐದು ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟುವ ಎರಡು ಬಾಲುಗಳು (ಸಣ್ಣ ಕತ್ತಿಗಳು) ಹಾಗೂ ರೂ.970 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ.15/2026ರಲ್ಲಿ ಕೆ.ಪಿ.ಅಕ್ಟ್ 87 ಮತ್ತು ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960ರ ಕಲಂ 11(1)(m)(ii), 11(1)(n) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *