ಪುತ್ತೂರು: ಪುತ್ತೂರು ನಗರಸಭೆ ಕಟ್ಟಡದ ಸಮೀಪ ಕಟ್ಟಡ ನಿರ್ಮಾಣದ ವೇಳೆ ಸರ್ಕಾರಿ ಭೂಮಿ ಮತ್ತು ಸಾರ್ವಜನಿಕ ಕೆರೆಯನ್ನು ಅತಿಕ್ರಮಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಶೀಲ್ದಾರ್, ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿರುವುದಾಗಿ ನೆಹರುನಗರ ನಿವಾಸಿ ಸಂತೋಷ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.




ಪುತ್ತೂರು ಹೋಬಳಿಯ ಪುತ್ತೂರು ಕಸಬಾ ಗ್ರಾಮದ ಸರ್ವೆ ನಂ.133/9ಎ (0.02 ಎಕರೆ) ಸರಕಾರಿ ಜಾಗದಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದ ಬಾವಿ, ಆಯತಾಕಾರದ ಕಲ್ಲುಘಟನೆ, 15 ಅಡಿ ಅಗಲದ ಕಲ್ಲಿನ ತಡೆಗೋಡೆ ಮತ್ತು ಸುಮಾರು 900 ಚದರ ಅಡಿ ವಿಸ್ತೀರ್ಣದ ಕೆರೆ ಇದ್ದು, ಈ ಬಾವಿ ಸ್ಥಳೀಯ ದೇವಿಯ ಆರಾಧನೆಗೆ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಗೆ ನೀರು ಒದಗಿಸುತ್ತಿತ್ತು. ಅಲ್ಲದೆ ಸ್ಥಳೀಯ ನಿವಾಸಿಗಳ ಗೃಹೋಪಯೋಗ ಹಾಗೂ ದನಕರಗಳಿಗೂ ಈ ನೀರು ಉಪಯೋಗವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಕೆರೆಗೆ ತಾಗಿಕೊಂಡಿರುವ ಸರ್ವೆ ನಂ.133/9ಬಿ (0.06 ಎಕರೆ) ಜಾಗವನ್ನು ಸ್ಥಳೀಯ ವಕೀಲರಾದ ಅರುಣಾ ದಿನಕರ ರೈ ಕ್ರಯಪತ್ರದ ಮೂಲಕ ಖರೀದಿ ಮಾಡಿ, ಬಾವಿಯನ್ನು ಮುಚ್ಚಿ ಸಮತಟ್ಟು ಮಾಡಿ ‘ಎಡಿಆರ್ ಹೈಟ್ಸ್’ ಎಂಬ ಬೃಹತ್ ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಟ್ಟಡಕ್ಕೆ ನಗರಸಭೆಯಿಂದ 6 ಸೆಂಟ್ಸ್ ಜಾಗದಲ್ಲಿ ನಕ್ಷೆ ಪರವಾನಿಗೆ ಪಡೆದಿದ್ದರೂ, ಭಾಗಶಃ ಕೆರೆಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕಟ್ಟಡ ಕಾಮಗಾರಿ ಮುಗಿದ ಬಳಿಕ ಉಳಿದಿರುವ ಸರ್ಕಾರಿ ಬಾವಿಯ ಜಾಗವನ್ನು ಪಾರ್ಕಿಂಗ್ಗೆ ಬಳಸುವ ಉದ್ದೇಶವಿದೆ ಎಂದು ಸಂತೋಷ್ ಶೆಟ್ಟಿ ಆರೋಪಿಸಿದರು.


ಈ ಕುರಿತು ಅರುಣಾ ದಿನಕರ ರೈ ವಿರುದ್ಧ ಸರ್ಕಾರಿ ಜಾಗದ ಬಾವಿಯನ್ನು ಒತ್ತುವರಿ ಮಾಡಿ ಮುಚ್ಚಿದ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ವಕೀಲರಾದ ಚಿದಾನಂದ ರೈ ಕೋಡಿಂಬಾಡಿ ಹಾಗೂ ಹೈಕೋರ್ಟ್ ವಕೀಲರಾದ ಗೋವಿಂದರಾಜ್ ಅವರ ಮೂಲಕ ದೂರು ಸಲ್ಲಿಸಲಾಗಿದ್ದು, ಈ ಪ್ರಕರಣದ ತನಿಖೆಗೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ ಎಂದು ಹೇಳಿದರು.
ನನ್ನ ಮೇಲೆ ಸುಳ್ಳು ಆರೋಪ: ಸಂತೋಷ್ ಶೆಟ್ಟಿ
ತಮ್ಮ ವಿರುದ್ಧ ರೂ.65 ಲಕ್ಷ ಪಡೆದಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಸಂತೋಷ್ ಶೆಟ್ಟಿ, ತಾವು ಯಾರಿಂದಲೂ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. 2019ರ ಜುಲೈನಲ್ಲಿ ಅಶ್ಮಿ ಕಾಂಪ್ಲೆಕ್ಸ್ನಲ್ಲಿ ಬಾರ್ ಲೈಸೆನ್ಸ್ಗಾಗಿ ಕಟ್ಟಡವನ್ನು ನೀಡಿದ್ದು, ಸೆಪ್ಟೆಂಬರ್ ನಂತರ ಹಣ ಮಾಡಿರುವುದು ದಿನಕರ ರೈ ಎಂದು ಹೇಳಿದರು. ದಿನಕರ ರೈ ಅವರ ಪುತ್ರ ಅಧೀಕ್ಷ್ ರೈ ಅವರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ನೀರು, ವಿದ್ಯುತ್ ಹಾಗೂ ನಗರಸಭೆ ವ್ಯಾಪಾರ ಶುಲ್ಕವನ್ನು ಅವರೇ ಪಾವತಿಸಬೇಕಾಗಿತ್ತು. ಅದನ್ನು ಪಾವತಿಸದೆ ಈಗ ಹಣ ಕೇಳುತ್ತಿರುವುದು ಸರಿಯಲ್ಲ ಎಂದು ಅವರು ಪ್ರಶ್ನಿಸಿದರು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಲಯದ ತೀರ್ಪಿಗೆ ನಾವು ಬದ್ದರಾಗಿದ್ದೇವೆ ಎಂದರು.


ದಾಖಲೆಗಳು ನಮ್ಮ ಬಳಿ
ಕೆರೆ ಇದ್ದುದಕ್ಕೆ ಸಂಬಂಧಿಸಿದಂತೆ ಅಡಂಗಲ್, ಚಿಟ್ಟೆ, ಕೈಬರಹ ಆರ್ಟಿಸಿ, ಪಹಣಿ ಪತ್ರ, ಎಫ್ಎಂಬಿ ನಕ್ಷೆ, ನಗರಸಭೆಯ ದಾಖಲೆಗಳು ಹಾಗೂ ಸರ್ವೆ ಸಪ್ಲಿಮೆಂಟ್ ರಿಜಿಸ್ಟರ್ ಸೇರಿದಂತೆ ಹಲವು ದಾಖಲೆಗಳು ನಮ್ಮ ಬಳಿ ಇವೆ ಎಂದು ಸಂತೋಷ್ ಶೆಟ್ಟಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅತಿಕ್ರಮಣಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದರು.

