ಪುತ್ತೂರು: ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಹಿನ್ನಲೆಯಲ್ಲಿ ‘ಮಹಿಳಾ ಸಂಭ್ರಮ’ ಕಾರ್ಯಕ್ರಮವನ್ನು ಮಾ.8ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಹಾಗೂ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 9 ಬ್ಲಾಕ್‌ಗಳ ವ್ಯಾಪ್ತಿಯ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ ಹಾಗೂ ಅನಿತಾ ಹೇಮನಾಥ ಶೆಟ್ಟಿ ದಂಪತಿಗಳ ಉಪಸ್ಥಿತಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಳಿಕ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಅಶೋಕ್ ರೈ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಪದ್ಮರಾಜ್ ಪೂಜಾರಿ, ಐವಾನ್ ಡಿಸೋಜ, ನಿಗಮ ಅಧ್ಯಕ್ಷರಾದ ಶಾಲೆಟ್ ಪಿಂಟೊ, ಲಾವಣ್ಯ ಬಳ್ಳಾಲ್, ಮಮತಾ ಗಟ್ಟಿ, ಮಾಜಿ ಸೈನಿಕರಾದ ಅಲ್ಫೋನ್ಸಾ ನೆಲ್ಯಾಡಿ, ಚರಿಷ್ಮಾ ರೈ ಹಾಗೂ ಡಾ. ಶೆರಿಲ್ಲಾ ಭಾಗವಹಿಸಲಿದ್ದಾರೆ. ಸಮಾಜದಲ್ಲಿ ಮಹಿಳೆಯರ ಪಾತ್ರ ಕುರಿತಾಗಿ ಡಾ. ಶೆರಿಲ್ಲಾ ಉಪನ್ಯಾಸ ನೀಡಲಿದ್ದಾರೆ.

ಪ್ರಿಯದರ್ಶಿನಿ ವೀರನಾರಿ ಪ್ರಶಸ್ತಿ ಪ್ರದಾನ;
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಮೊಟ್ಟಮೊದಲ ಬಾರಿಗೆ 8 ಮಂದಿ ಮಾಜಿ ಮಹಿಳಾ ಸೈನಿಕರಿಗೆ ‘ಪ್ರಿಯದರ್ಶಿನಿ ವೀರನಾರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಲ್ಫೋನ್ಸಾ ನೆಲ್ಯಾಡಿ, ಸ್ಯಾಂಡಿ ಸೆಬಾಸ್ಟಿನ್, ಮಿನಿ ಸಂತೋಷ್, ಲಿಸ್ಸಿ ಡೊಮಿನಿಕ್, ಸವಿತಾ ವಿಕ್ರಂ ಶೆಟ್ಟಿ, ಕಮಲಾಕ್ಷಿ, ಯಶೋದಾ ಹಾಗೂ ಶಕುಂತಳಾ ನಾಯ್ಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನೂ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಮಿತಾ ಡಿ. ರಾವ್, ಜಿಲ್ಲಾ ಉಪಾಧ್ಯಕ್ಷೆ ಚಂದ್ರಕಲಾ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆ್ಯನಿ ಮಿನೇಜಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *