ಪುತ್ತೂರು: ಪುತ್ತೂರು–ಉಪ್ಪಿನಂಗಡಿ ರಸ್ತೆಯ ಬೇರಿಕೆ ಪ್ರದೇಶದಲ್ಲಿ ಕೃಷಿ ಭೂಮಿಯ ಪಕ್ಕದಲ್ಲೇ ಲೇಔಟ್ ನಿರ್ಮಾಣ ಮಾಡುವ ಸಂದರ್ಭ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿ ನೈಸರ್ಗಿಕ ಮಳೆನೀರು ಹರಿವಿನ ಮಾರ್ಗ ಹಾಗೂ ಒಳಚರಂಡಿ ವ್ಯವಸ್ಥೆಗೆ ಅಡ್ಡಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುತ್ತೂರಿನ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ಸಿ ನ್ಯಾಯಾಲಯವು ಲೇಔಟ್ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.


ಚಂದ್ರಾವತಿ ಹಾಗೂ ಅವರ ಮಕ್ಕಳು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬೇರಿಕೆ ಪ್ರದೇಶದಲ್ಲಿ ಲೇಔಟ್ ನಿರ್ಮಾಣ ಮಾಡುವ ವೇಳೆ ಪಕ್ಕದಲ್ಲಿರುವ ಚಂದ್ರಾವತಿ ಮತ್ತು ಅವರ ಮಕ್ಕಳ ಕೃಷಿ ತೋಟಗಳಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.




ಅವೈಜ್ಞಾನಿಕ ತಡೆಗೋಡೆ ನಿರ್ಮಾಣದಿಂದ ನೈಸರ್ಗಿಕ ಮಳೆನೀರು ಹರಿಯುವ ಮಾರ್ಗಕ್ಕೆ ಅಡ್ಡಿಯಾಗಿದ್ದು, ಪರಿಣಾಮವಾಗಿ ಸುಮಾರು 300ಕ್ಕೂ ಅಧಿಕ ಅಡಿಕೆ ಮರಗಳು ನಾಶವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಕೀಲ ನಾಗೇಶ್ ಶರ್ಮ ಅವರ ಮೂಲಕ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು.
ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಪುತ್ತೂರಿನ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ಸಿ ನ್ಯಾಯಾಲಯವು ಕಾನೂನುಬದ್ಧ ಯೋಜನೆಯಿಲ್ಲದೆ ತಡೆಗೋಡೆ ನಿರ್ಮಿಸಿ ನೈಸರ್ಗಿಕ ನೀರಿನ ಹರಿವಿಗೆ ತಡೆ ಉಂಟುಮಾಡಿರುವುದು ಪಕ್ಕದ ಕೃಷಿ ಭೂಮಿಗೆ ಹಾನಿ ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದು, ತಕ್ಷಣವೇ ಲೇಔಟ್ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ.








