ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗೋ-ಕುಟೀರಕ್ಕೆ ಶುದ್ಧ ದೇಶೀಯ ತಳಿ ಮತ್ತು ಗಿಡ್ಡ ತಳಿಯ ಗೋವುಗಳನ್ನು ದಾನವಾಗಿ ನೀಡಲು ಭಗವದ್ಭಕ್ತರು, ಗೋ-ಭಕ್ತರು ಹಾಗೂ ಗೋ-ಪೋಷಕರಿಗೆ ಆಹ್ವಾನ ನೀಡಲಾಗಿದೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿರುವ ಗೋ-ಕುಟೀರವು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಅದರ ಪ್ರವೇಶೋತ್ಸವದ ಮುನ್ನ ಶ್ರದ್ಧಾಭಕ್ತಿಯಿಂದ ಗೋ-ದಾನ ಮಾಡಲು ಆಸಕ್ತರು ಹಾಲು ಕರೆಯುವ ದನ, ಕರುಗಳು ಅಥವಾ ಹೆಣ್ಣು ಕರುಗಳನ್ನು ದಾನ ರೂಪದಲ್ಲಿ ನೀಡಬಹುದು. ಅಲ್ಲದೆ ಗೋವುಗಳನ್ನು ಪೋಷಿಸಲು ಪ್ರಾಯೋಜಕತ್ವ ವಹಿಸಿ ಗೋ-ಸೇವೆ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ.

ಕಾಸರಗೋಡು ಗಿಡ್ಡ ತಳಿ, ಮಲೆನಾಡು ಗಿಡ್ಡ ತಳಿ ಸೇರಿದಂತೆ ಶುದ್ಧ ದೇಶೀಯ ತಳಿಯ ಗೋವುಗಳನ್ನು ಸಂರಕ್ಷಿಸಿ ಬೆಳೆಸುವ ಉದ್ದೇಶದಿಂದ ಈ ಗೋ-ಕುಟೀರವನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಪ್ರದೇಶದಲ್ಲಿ ಗೋವುಗಳನ್ನು ಭಕ್ತಿಯಿಂದ ಆರಾಧಿಸುವ ನೂರಾರು ಗೋ-ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಇದನ್ನು ರೂಪುಗೊಳಿಸುವ ಯೋಜನೆ ರೂಪಿಸಲಾಗಿದೆ.
ಸಾರ್ವಜನಿಕರು ಹಾಗೂ ಗೋ-ಪೋಷಕರ ಸಹಕಾರ ಮತ್ತು ಪ್ರಾಯೋಜಕತ್ವದಡಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಗೋ-ಕುಟೀರದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ದೇವಸ್ಥಾನಗಳು, ಕ್ಷೇತ್ರಗಳು, ಮಠಗಳು, ಮಂದಿರಗಳು ಮತ್ತು ದೈವಸ್ಥಾನಗಳಲ್ಲಿ ನಡೆಯುವ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ, ಪುನರ್ ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮಕಲಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಉತ್ಸವಗಳು, ಗೃಹ ಪ್ರವೇಶ ಹಾಗೂ ಇತರ ಪೂಜಾ ಕಾರ್ಯಕ್ರಮಗಳಲ್ಲಿ ಗೋವುಗಳ ಪ್ರವೇಶೋತ್ಸವದ ಮೂಲಕ ಆರಾಧನೆ ಮಾಡುವ ಉದ್ದೇಶವೂ ಇದಕ್ಕೆ ಇದೆ.
ಇದಲ್ಲದೆ ಧಾರ್ಮಿಕ ಪೂಜಾ ಕಾರ್ಯಗಳಿಗೆ ಅಗತ್ಯವಾಗುವ ಗೋಮೂತ್ರ, ಪಂಚಗವ್ಯ, ಗೋಸಗಣಿ ಹಾಗೂ ಗೋಮಯವನ್ನು ದಿನನಿತ್ಯವಾಗಿ ಅಗತ್ಯವಿರುವವರಿಗೆ ಒದಗಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಗೋ-ಭಕ್ತರು ಗೋ-ಕುಟೀರದಲ್ಲಿರುವ ಗೋವುಗಳನ್ನು ದತ್ತು ಪಡೆದು ಒಂದು ವರ್ಷದ ಕಾಲ ಗೋಗ್ರಾಸ ನೀಡಿ ಪೋಷಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಸಂಪರ್ಕಿಸಬಹುದು.
ಮೊಬೈಲ್: 9448572016
ಇ-ಮೇಲ್: shivaramakasaragod@gmail.com
ದೇಣಿಗೆಗಳನ್ನು ಗೂಗಲ್ ಪೇ ಮೂಲಕ 9448572016 ಸಂಖ್ಯೆಗೆ ಪಾವತಿಸಬಹುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *