ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ರಥಬೀದಿಯಲ್ಲಿ ಹೋರಿಗಳ ಕಾಳಗದಿಂದ ಮಹಿಳೆ ಮತ್ತು ಮಗು ಗಾಯಗೊಂಡಿರುವ ಘಟನೆ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರಥಬೀದಿಯಲ್ಲಿ ಎರಡು ಹೋರಿಗಳ ನಡುವೆ ಏಕಾಏಕಿ ಭೀಕರ ಕಾಳಗ ಆರಂಭವಾಗಿದ್ದು, ಅವುಗಳನ್ನು ತಡೆಯಲು ಅಕ್ಕಪಕ್ಕದಲ್ಲಿದ್ದವರು ಪ್ರಯತ್ನಿಸಿದ ವೇಳೆ ಹೋರಿಗಳು ರೊಚ್ಚಿಗೆದ್ದು ಭಕ್ತರ ಗುಂಪಿನತ್ತ ನುಗ್ಗಿದವು. ಈ ಸಂದರ್ಭದಲ್ಲಿ ಪ್ರಾಣಭಯದಿಂದ ಓಡಲು ಯತ್ನಿಸಿದ ಮಹಿಳೆ ಮತ್ತು ಮಗು ಎಡವಿ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿ ಅವರನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಾಜ್ಯದ ಅತಿ ಹೆಚ್ಚು ಆದಾಯ ಗಳಿಸುವ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೋಟಿ ಕೋಟಿ ರೂಪಾಯಿ ಕಾಣಿಕೆ ಹರಿದುಬರುತ್ತಿದ್ದರೂ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ರಥಬೀದಿ ಪ್ರದೇಶದಲ್ಲಿ ಜಾನುವಾರುಗಳು ಹಾಗೂ ಬೀದಿ ನಾಯಿಗಳು ಮುಕ್ತವಾಗಿ ಸಂಚರಿಸುತ್ತಿದ್ದರೂ ಅವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಜಾನುವಾರುಗಳ ಹಾವಳಿ ಇತ್ತೀಚಿನದ್ದಲ್ಲ. ಈ ಹಿಂದೆ ಕೂಡ ಇಂತಹ ಹಲವು ಘಟನೆಗಳು ನಡೆದಿದ್ದರೂ ಸಂಬಂಧಪಟ್ಟ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ರಥಬೀದಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಪ್ರಾಣಿಗಳ ಸಂಚಾರವನ್ನು ತಡೆಗಟ್ಟಲು ಸೂಕ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರ ಜೊತೆಗೆ ಜಾನುವಾರುಗಳನ್ನು ಗೋಶಾಲೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕರು ಹಾಗೂ ಭಕ್ತರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *