ಕಡಬ: ಭೌಗೋಳಿಕ ಅಂತರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮವನ್ನು ಪ್ರಸ್ತುತ ಇರುವ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಹೊರತುಪಡಿಸಿ ಹತ್ತಿರದ ಕಡಬ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿಸಬೇಕು ಎಂಬ ಬೇಡಿಕೆ ಮತ್ತೆ ಮುಂದಿಟ್ಟಲಾಗಿದೆ.

ಈ ಸಂಬಂಧ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ರಾಜ್ಯದ ಗೃಹ ಸಚಿವರಾದ ಜಿ . ಪರಮೇಶ್ವರ ಅವರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ.
ಎಡಮಂಗಲ ಗ್ರಾಮವು ಪ್ರಸ್ತುತ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ ಎಡಮಂಗಲದಿಂದ ಬೆಳ್ಳಾರೆ ಪೊಲೀಸ್ ಠಾಣೆಗೆ ಸುಮಾರು 13 ಕಿಲೋಮೀಟರ್ ದೂರವಿದ್ದು, ಕಡಬ ಪೊಲೀಸ್ ಠಾಣೆ ಕೇವಲ ಆರು ಕಿಲೋಮೀಟರ್ ದೂರದಲ್ಲಿದೆ. ತುರ್ತು ಸಂದರ್ಭಗಳಲ್ಲಿ ಹತ್ತಿರದ ಠಾಣೆಯನ್ನು ತಲುಪಲು ಗ್ರಾಮಸ್ಥರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಬೇಡಿಕೆ ಹೊಸದಲ್ಲ. 2025ರ ಅಕ್ಟೋಬರ್ 16ರಂದು ನಡೆದ ಎಡಮಂಗಲ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಈ ವಿಷಯವನ್ನು ಅಧಿಕೃತವಾಗಿ ಮುಂದಿಟ್ಟಿದ್ದರು. ಗ್ರಾಮಸಭೆಯ ನಿರ್ಣಯದಂತೆ ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು 2025ರ ನವೆಂಬರ್ 26ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದರು.
ಗ್ರಾಮಸ್ಥರಾದ ವಿನಯ ಚಂದ್ರ ಅವರು ಈ ವಿಷಯವಾಗಿ ಶಾಸಕರಿಗೆ ಮನವಿ ಸಲ್ಲಿಸಿ ನಿರಂತರವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಾರ್ಚ್ 9, 2026ರಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಗೃಹ ಸಚಿವರಿಗೆ ಪತ್ರ ಬರೆದು ಎಡಮಂಗಲ ಗ್ರಾಮವನ್ನು ಕಡಬ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಈ ಪತ್ರದ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೂ ರವಾನಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *