ಉಪ್ಪಿನಂಗಡಿ: ನ್ಯಾಷನಲ್ ಹೈವೇ 75 ರ ಸರ್ವೀಸ್ ರಸ್ತೆಯಲ್ಲಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಐದು ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.

ಉಪ್ಪಿನಂಗಡಿಯ ಗವರ್ನಮೆಂಟ್ ಮಾಡೆಲ್ ಸ್ಕೂಲ್ ಉಪ್ಪಿನಂಗಡಿ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್ ಜಾಝೀಬ್ (13), ಮಹಮ್ಮದ್ ಇರ್ಷಾದ್ (11), ನೂರ್ ಮಹಮದ್ (10), ಮಹಮದ್ ರಾಝೀಲ್ (7), ಸಜ್ಮಾ (4) ಹಾಗೂ ಆಟೋ ಚಾಲಕ ಕಲಂದರ್ ಶಾಫಿ (46) ಗಾಯಗೊಂಡವರು.
ನೆಕ್ಕಿಲಾಡಿ ಪ್ರದೇಶದ ನಿವಾಸಿಗಳಾದ ಈ ಮಕ್ಕಳು ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಚಾಲಕ ಕಲಂದರ್ ಶಾಫಿ ಅವರು ಎಂದಿನಂತೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಸರ್ವೀಸ್ ರಸ್ತೆಯಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ತಕ್ಷಣ ಸ್ಥಳೀಯರು ಸೂರ್ಯ ಹಾಸ್ಪಿಟಲ್ ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಹಾಗೂ ಪುತ್ತೂರು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *