ಕಡಬ: ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದಕಟ್ಟೆ ಪರಿಸರದಲ್ಲಿ ಸೋಮವಾರ ರಾತ್ರಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಬಳಿಕ ಅದೇ ಆನೆ ನೆಟ್ಟನದ ವಾಲ್ತಾಜೆ ಭಾಗದಲ್ಲೂ ಕಾಣಿಸಿಕೊಂಡಿದೆ.
ಕಾಡಿನಿಂದ ಹೊರಬಂದ ಆನೆ ರಬ್ಬರ್ ತೋಟದ ಮೂಲಕ ಸಂಚರಿಸುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವೂ ಹರಡುತ್ತಿದೆ.

ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಕೆಲವೇ ದಿನಗಳ ಹಿಂದೆ ಐತ್ತೂರು ಗ್ರಾಮದ ನೆಟ್ಟನ ಬೈಲು ಪ್ರದೇಶದಲ್ಲಿ ಕಾಡಾನೆ ಕೃಷಿಕರ ತೋಟಕ್ಕೆ ನುಗ್ಗಿ ನೂರಾರು ಬಾಳೆ ಗಿಡಗಳು ಹಾಗೂ ಅಡಿಕೆ ಮರಗಳನ್ನು ನಾಶಪಡಿಸಿ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿತ್ತು.
ಇದೀಗ ಮತ್ತೆ ಸುಂಕದಕಟ್ಟೆ ಪರಿಸರದಲ್ಲಿ ಆನೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರ ನಿದ್ದೆ ಕದಡಿದೆ. ಅರಣ್ಯ ಇಲಾಖೆ ಆನೆಗಳ ಚಲನೆಯನ್ನು ಗಮನಿಸುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ಮರಳಿ ಕಾಡಿಗೆ ಹಟ್ಟಿಸಲು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *