ಕಡಬ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಪ್ರದೇಶದಲ್ಲಿ ಬಾವಿ ತೋಡುವ ವೇಳೆ ಸ್ಪೋಟಕ ಬಳಸಿದ ಪರಿಣಾಮ ಸಮೀಪದ ಮನೆಗಳಿಗೆ ಹಾನಿಯಾಗಿರುವ ಘಟನೆ ಮಾರ್ಚ್ 8ರಂದು ನಡೆದಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ನಿವಾಸಿ ಸೋಮಶೇಖರ್ ಅವರು ತಮ್ಮ ಸಂಬಂಧಿಕರಿಂದ ಸುಮಾರು 23 ಸೆಂಟ್ ಜಾಗವನ್ನು ಖರೀದಿಸಿದ್ದು, ಆ ಜಾಗದಲ್ಲಿ ಅಡಿಕೆ ಮರಗಳಿದ್ದು ನೀರಿಗಾಗಿ ಬಾವಿ ತೋಡುವ ಕೆಲಸ ಆರಂಭಿಸಿದ್ದರು. ಸುಮಾರು 15 ಅಡಿ ಆಳದಲ್ಲಿ ಕಲ್ಲು ಸಿಕ್ಕಿದ ಹಿನ್ನೆಲೆಯಲ್ಲಿ ಕಲ್ಲು ಒಡೆಯಲು ಸ್ಪೋಟಕ ಬಳಸಲಾಗಿದೆ ಎಂದು ತಿಳಿದುಬಂದಿದೆ.




ಮಾರ್ಚ್ 8ರಂದು ಸ್ಪೋಟಕ ಸಿಡಿಸಿದ ಪರಿಣಾಮ ಸಮೀಪದಲ್ಲಿರುವ ವಾಮನ ಮೂಲ್ಯ ಮತ್ತು ಕೆ.ಟಿ. ಮೋಹನ ಅವರ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಉಂಟಾಗಿ ಹಾನಿಯಾಗಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, Kadaba Police Station ಸಬ್ ಇನ್ಸ್ಪೆಕ್ಟರ್ ಜಂಬುರಾಜ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ವೇಳೆ ಬಾವಿಯೊಳಗೆ ಸಿಡಿಯದೇ ಉಳಿದಿದ್ದ ಸ್ಪೋಟಕಗಳನ್ನು ತೆರವುಗೊಳಿಸಲು ಮಾರ್ಚ್ 10ರಂದು ಬೆಳಗ್ಗೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ. ಈ ವೇಳೆ ಕಡಬ ಎಸ್ಐ ಜಂಬುರಾಜ್ ಹಾಗೂ ಎಫ್ಎಸ್ಎಲ್ ತಂಡದ ಸಿಬ್ಬಂದಿಗಳು ಉಪಸ್ಥಿತರಿದ್ದರು.




