ಸುಬ್ರಹ್ಮಣ್ಯ, ಮಾ.11: ದೇಶದಲ್ಲಿ ಉಂಟಾಗಿರುವ ಗ್ಯಾಸ್ ಪೂರೈಕೆ ವ್ಯತ್ಯಯದ ಪರಿಣಾಮ ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಕಂಡುಬಂದಿದೆ. ಗ್ಯಾಸ್ ಕೊರತೆಯ ಹಿನ್ನೆಲೆ ಮಾರ್ಚ್ 11ರಿಂದ ದೇವಸ್ಥಾನದಲ್ಲಿ ಬೆಳಗಿನ ಉಪಹಾರ ವಿತರಣೆಯಲ್ಲಿ ಬದಲಾವಣೆ ಮಾಡಲಾಗಿದೆ.




ದೇವಸ್ಥಾನದಲ್ಲಿ ಪ್ರತಿದಿನ ಭಕ್ತರಿಗೆ ವಿವಿಧ ಬಗೆಯ ಬಿಸಿ ಉಪಹಾರಗಳನ್ನು ವಿತರಿಸಲಾಗುತ್ತಿತ್ತು. ಆದರೆ ಗ್ಯಾಸ್ ಪೂರೈಕೆ ವ್ಯತ್ಯಯದಿಂದಾಗಿ ಬೇಯಿಸುವ ತಿನಿಸುಗಳ ಬದಲಿಗೆ ತಾತ್ಕಾಲಿಕವಾಗಿ ಅವಲಕ್ಕಿ-ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ದೇವಸ್ಥಾನದಲ್ಲಿ ಮುಂದಿನ ಮೂರು ದಿನಗಳಿಗೆ ಬೇಕಾಗುವಷ್ಟು ಗ್ಯಾಸ್ ಮಾತ್ರ ಲಭ್ಯವಿದೆ. ಬಳಿಕವೂ ಪೂರೈಕೆ ಆಗದಿದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ದಿನಕ್ಕೆ ಸುಮಾರು 20 ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡಲು ಸಂಬಂಧಿಸಿದ ಸಂಸ್ಥೆಗಳಿಗೆ ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಗ್ಯಾಸ್ ಪೂರೈಕೆ ಸಮಸ್ಯೆ ಮುಂದುವರಿದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ದೇವಸ್ಥಾನ ಆಡಳಿತ ಚಿಂತನೆ ನಡೆಸಿದ್ದು, ಯಾವುದೇ ಬದಲಾವಣೆ ಮಾಡಿದಲ್ಲಿ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.




