ಐರ್ಲೆಂಡ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಜಿಲ್ಲೆಯ ಕಡಬದ ಯುವಕ ಸಾಂಜೋ ಸುನಿಲ್ ಅವರ ಮರಣಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಶನಿವಾರ (ಮಾ.14) ಸಂಜೆ 6 ಗಂಟೆಗೆ ಕಡಬ ಪಟ್ಟಣದಲ್ಲಿ ಮೇಣದ ಬತ್ತಿ ಬೆಳಕಿನ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆಯನ್ನು ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ (ರಿ) ಮತ್ತು ಕಡಬ ಮಲಯಾಳಿ ಸಂಘ ಸಂಯುಕ್ತವಾಗಿ ಆಯೋಜಿಸುತ್ತಿದ್ದು ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.




ಸಾಂಜೋ ಸುನಿಲ್ ಅವರ ಸಾವಿನ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕು ಹಾಗೂ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಉದ್ದೇಶದಿಂದ ಈ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಭಾಗವಹಿಸುವವರು ಮೇಣದ ಬತ್ತಿಗಳನ್ನು ಬೆಳಗಿಸಿ ಶಾಂತಿಯುತವಾಗಿ ನ್ಯಾಯದ ಬೇಡಿಕೆಯನ್ನು ವ್ಯಕ್ತಪಡಿಸಲಿದ್ದಾರೆ. ಸಾಂಜೋ ಅವರ ಕುಟುಂಬಕ್ಕೆ ನೈತಿಕ ಬೆಂಬಲ ನೀಡುವ ಜೊತೆಗೆ, ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಸಂಘಟನೆಗಳು ಹೇಳಿವೆ.
ತನ್ನ ಮಗನ ಸಾವಿನಲ್ಲಿ ಸಂಶಯವಿರುವ ಬಗ್ಗೆ ಈಗಾಗಲೇ ಮೃತ ಸಾಂಜೋ ಅದರ ತಂದೆ ಸುನಿಲ್ ಅವರು ಕಡಬ ಪೋಲಿಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆಯೋಜಕರು ಕಡಬ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಂಜೋ ಸುನಿಲ್ ಅವರಿಗೆ ನ್ಯಾಯ ದೊರಕಿಸುವ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.


