ಬೆಂಗಳೂರು: ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ‘ಡಿಜಿಟಲ್ ಅರೆಸ್ಟ್’ ಹಾಗೂ ಸೈಬರ್ ವಂಚನೆ ಪ್ರಕರಣಗಳ ಕರಾಳ ಮುಖವನ್ನು ಬಿಚ್ಚಿಟ್ಟ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸೈಬರ್ ಸುಲಿಗೆಯನ್ನು ತಡೆಯಲು ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸೈಬರ್ ಠಾಣೆಗಳಿಗೆ ಹೆಚ್ಚಿನ ಸಿಬ್ಬಂದಿ ಒದಗಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ‘ನಿಲ್ಲದ ಡಿಜಿಟಲ್ ಎರೆಸ್ಟ್ ಸುಲಿಗೆ’ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಅಮಾಯಕ ವೃದ್ಧರನ್ನು ಹಾಗೂ ಸಾರ್ವಜನಿಕರನ್ನು ಹೇಗೆ ಬೆದರಿಸಿ ಹಣ ದೋಚಲಾಗುತ್ತಿದೆ ಎಂಬುದನ್ನು ಸದನದ ಗಮನಕ್ಕೆ ತಂದರು. ವೈಟ್ಫೀಲ್ಡ್ನ ಅಪಾರ್ಟ್ಮೆಂಟ್ವೊಂದರ ವೃದ್ಧರೊಬ್ಬರಿಗೆ ಕರೆ ಮಾಡಿದ ವಂಚಕರು, ‘ಮುಂಬೈ ಪೊಲೀಸ್’ ಎಂದು ಹೆದರಿಸಿ, ಅವರ ಖಾತೆಯಿಂದ ಉಗ್ರಗಾಮಿಗಳಿಗೆ ಹಣ ಸಂದಾಯವಾಗುತ್ತಿದೆ ಎಂದು ಬೆದರಿಸಿ ಆನ್ಲೈನ್ ಮೂಲಕ ಬರೋಬ್ಬರಿ 16.60 ಲಕ್ಷ ರೂ.ಗಳನ್ನು ಸುಲಿಗೆ ಮಾಡಿರುವ ಆಘಾತಕಾರಿ ಘಟನೆಯನ್ನು ಪ್ರಸ್ತಾಪಿಸಿದರು.




ಗೃಹ ಇಲಾಖೆಯ ಅಂಕಿ-ಅಂಶಗಳನ್ನೇ ಮುಂದಿಟ್ಟು ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದ ಕಿಶೋರ್ ಕುಮಾರ್ ಅವರು, 2023, 2024 ಮತ್ತು 2025ರ ಅವಧಿಯಲ್ಲಿ ರಾಜ್ಯದಲ್ಲಿ ನಡೆದಿರುವ ಸೈಬರ್ ವಂಚನೆಯ ಬೃಹತ್ ಜಾಲದ ಮಾಹಿತಿಯನ್ನು ಹಂಚಿಕೊಂಡರು. ರಾಜ್ಯದಲ್ಲಿ ಈ ಮೂರು ವರ್ಷಗಳಲ್ಲಿ ಒಟ್ಟು 59,626 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 8,170 ಕೋಟಿ ರೂ. (ರೂ. 81,70,87,44,878) ವಂಚನೆಯಾಗಿದೆ. ಇದರಲ್ಲಿ ಈವರೆಗೂ 48,173 ಪ್ರಕರಣಗಳು ಪತ್ತೆಯಾಗದೆ ಉಳಿದಿದ್ದು, 5,338 ಕೋಟಿ ರೂ. (ರೂ. 53,38,13,41,436) ಮೊತ್ತವನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂಬ ಆತಂಕಕಾರಿ ವಿಚಾರವನ್ನು ಹೊರಹಾಕಿದರು. ಇನ್ನು ಕೇವಲ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳನ್ನೇ ಗಮನಿಸಿದರೆ, ಒಟ್ಟು 1,655 ಪ್ರಕರಣಗಳು ದಾಖಲಾಗಿದ್ದು, 372.77 ಕೋಟಿ ರೂ. (ರೂ. 3,72,77,11,003) ವಂಚನೆಯಾಗಿದೆ. ಇದರಲ್ಲಿಯೂ 1,372 ಪ್ರಕರಣಗಳು ಪತ್ತೆಯಾಗದೆ 339.14 ಕೋಟಿ ರೂ. (ರೂ. 3,39,14,02,567) ಮೊತ್ತವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂಬುದನ್ನು ಕಳವಳದಿಂದ ಸದನದ ಗಮನಕ್ಕೆ ತಂದರು.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆರ್ಥಿಕ ವಂಚನೆ ನಡೆಯುತ್ತಿದ್ದರೂ ಬಹುಪಾಲು ಪ್ರಕರಣಗಳು ಪತ್ತೆಯಾಗದಿರುವುದು ಅತ್ಯಂತ ಆತಂಕಕಾರಿ. ರಾಜ್ಯದಾದ್ಯಂತ ನಡೆಯುತ್ತಿರುವ ಇಂತಹ ಆರ್ಥಿಕ ವಂಚನೆಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸೈಬರ್ ಅಪರಾಧ ಠಾಣೆಗಳಲ್ಲಿ ಐಟಿ ಕಾಯ್ದೆ-2000 (Information Technology Act-2000) ಹಾಗೂ ಐಪಿಸಿ/ಬಿಎನ್ಎಸ್ (IPC/BNS) ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಸೈಬರ್ ಠಾಣೆಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ತಕ್ಷಣವೇ ಒದಗಿಸಬೇಕು. ಆ ಮೂಲಕ ಆನ್ಲೈನ್ ವಂಚನೆಗೊಳಗಾದ ಸಂತ್ರಸ್ತರಿಗೆ ಆದಷ್ಟು ಶೀಘ್ರದಲ್ಲಿ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಬಲವಾಗಿ ಒತ್ತಾಯಿಸಿದರು.


