ಕಡಬ: ನಿಯಂತ್ರಣ ತಪ್ಪಿದ ಮಾರುತಿ ಓಮ್ನಿ ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ದಂಪತಿಗಳು ಗಾಯಗೊಂಡ ಘಟನೆ ಉಪ್ಪಿನಂಗಡಿ -ಸುಬ್ರಹ್ಮಣ್ಯ ರಸ್ತೆ ಮಾರ್ಗ ದೇರಾಜೆಯ ಕುದ್ರಡ್ಕ ಎಂಬಲ್ಲಿ ನಡೆದಿದೆ.

ಕೊಣಾಜೆ ಗ್ರಾಮದ ಕೋಡಿಯಡ್ಕ ನಿವಾಸಿ ದಯಾನಂದ ಕೆ. ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ತೆರಳಿ ದೇವರ ದರ್ಶನ ಮುಗಿಸಿ ಮರಳುತ್ತಿದ್ದರು. ಮಾರ್ಚ್ 8ರಂದು ತಿರುಪತಿಯ ಪ್ರಸಾದ ನೀಡಲು ಚಾರ್ವಕ ಗ್ರಾಮದಲ್ಲಿರುವ ತಮ್ಮ ತಂಗಿಯ ಮನೆಗೆ ತೆರಳಿದ್ದರು. ಮಧ್ಯಾಹ್ನ ತಂಗಿಯ ಮನೆಯಲ್ಲಿ ಊಟ ಮುಗಿಸಿ ದಂಪತಿಗಳು ಮರಳುವಾಗ ಈ ಅಪಘಾತ ಸಂಭವಿಸಿದೆ.
ಆರಂಭದಲ್ಲಿ ದಯಾನಂದ ಅವರು ಕಾರು ಚಲಾಯಿಸುತ್ತಿದ್ದು, ನಂತರ ಅವರ ಪತ್ನಿ ಚಿತ್ರಾವತಿ ಅವರು ಚಾಲನೆ ಮುಂದುವರಿಸಿದ್ದರು. ಈ ವೇಳೆ ಚಾಲನೆ ವೇಳೆ ನಿಯಂತ್ರಣ ತಪ್ಪಿದ ಕಾರಣ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ಪರಿಣಾಮ ಕಾರಿನ ಎಡಭಾಗದಲ್ಲಿ ಕುಳಿತಿದ್ದ ದಯಾನಂದ ಅವರ ಎದೆಗೆ ಮುಂಭಾಗದಲ್ಲಿ ಹ್ಯಾಂಗೋ ಬಲವಾಗಿ ತಗುಲಿದ್ದು ಗಾಯವಾಗಿದೆ. ಚಾಲನೆ ಮಾಡುತ್ತಿದ್ದ ಚಿತ್ರಾವತಿ ಅವರಿಗೂ ಬಲಗಾಲಿನಲ್ಲಿ ತೊಂದರೆ ಉಂಟಾಗಿ, ಭುಜ ಹಾಗೂ ಎದೆಗೆ ಪೆಟ್ಟು ತಗುಲಿದೆ.
ಕೂಡಲೇ ಸ್ಥಳೀಯ ಸಾರ್ವಜನಿಕರು ಇಬ್ಬರನ್ನೂ ಆಟೋ ರಿಕ್ಷಾ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 281 ಹಾಗೂ 125(a) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *