ನೆಲ್ಯಾಡಿ: ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಹೋದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊನಾಲು ಗ್ರಾಮದ ಪಾತ್ರವಾಡಿ ಪ್ರದೇಶದಲ್ಲಿ ನಡೆದಿದೆ.




ಕೊನಾಲು ಗ್ರಾಮದ ನಿವಾಸಿ ಲೀಲಾವತಿ ಶೆಟ್ಟಿ (64) ಮೃತಪಟ್ಟ ಮಹಿಳೆ.
ಲೀಲಾವತಿಯವರ ಪುತ್ರ ಹರೀಶ್ ಅವರು ಲಾರಿ ಚಾಲಕರಾಗಿದ್ದು, ಮಾರ್ಚ್ 11ರಂದು ರಾತ್ರಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ತಾಯಿ ಮನೆಯಲ್ಲಿ ಕಾಣಿಸದ ಕಾರಣ ಆತಂಕಗೊಂಡಿದ್ದರು. ಬಳಿಕ ನೆರೆಮನೆಯವರ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ ತೋಟದಲ್ಲಿ ಲೀಲಾವತಿ ಶೆಟ್ಟಿ ಅವರು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಯಿತು.


ಮೃತದೇಹ ಪತ್ತೆಯಾದಾಗ ಅವರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇದ್ದುದಾಗಿ ತಿಳಿದುಬಂದಿದೆ. ತೋಟಕ್ಕೆ ನುಗ್ಗಿದ ಜಾನುವಾರುಗಳನ್ನು ಓಡಿಸಲು ಹೋಗಿದ್ದ ವೇಳೆ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದು, ಕೈಯಲ್ಲಿದ್ದ ಕಲ್ಲು ಅವರ ಹಣೆಗೆ ಬಲವಾಗಿ ತಗುಲಿ ಗಂಭೀರ ಗಾಯವಾಗಿದ್ದರಿಂದ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


