ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷ ಕಳೆದರೂ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರೋಳ್ಯ ಪ್ರದೇಶದ ನಿವಾಸಿಗಳಿಗೆ ಇನ್ನೂ ಸಮರ್ಪಕ ರಸ್ತೆ ಹಾಗೂ ಸೇತುವೆ ಸೌಕರ್ಯ ದೊರೆತಿಲ್ಲ. ಸುಮಾರು 10 ರಿಂದ 15 ಕುಟುಂಬಗಳು ವಾಸಿಸುವ ಈ ಪ್ರದೇಶದ ಜನರು ಕಳೆದ ಹಲವು ದಶಕಗಳಿಂದ ಗುಡ್ಡದ ನಡುವೆ ಇರುವ ಕಾಲುದಾರಿಯನ್ನೇ ಅವಲಂಬಿಸಿ ಪೇಟೆ ತಲುಪಬೇಕಾದ ಅನಿವಾರ್ಯತೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಸಂಕಷ್ಟಕರವಾಗುತ್ತದೆ. ತೋಡಿನಲ್ಲಿ ಆಳೆತ್ತರಕ್ಕೆ ನೀರು ಹರಿಯುವುದರಿಂದ ಗ್ರಾಮಕ್ಕೆ ಹೊರಗಿನ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಇದರಿಂದ ಸ್ಥಳೀಯರು ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಶಾಲಾ ಮಕ್ಕಳಿಗೂ ಶಾಲೆಗೆ ತೆರಳಲು ತೊಂದರೆಯಾಗುತ್ತದೆ. ಕೆಲ ಕುಟುಂಬಗಳು ಮಳೆಗಾಲದಲ್ಲಿ ತೋಡಿನ ಇನ್ನೊಂದು ಪಕ್ಕದಲ್ಲಿರುವ ಮನೆಗಳಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿಯೂ ಉಂಟಾಗುತ್ತದೆ. ಹಿರಿಯ ನಾಗರಿಕರು ಮಳೆಗಾಲ ಮುಗಿದ ಬಳಿಕವೇ ಮನೆಯಿಂದ ಹೊರಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಹಾಗೂ ಸೇತುವೆ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತಲುಪುವುದು ಕಷ್ಟವಾಗುತ್ತಿದ್ದು, ಸಮರ್ಪಕ ಚಿಕಿತ್ಸೆ ಸಿಗದೇ ಹಲವು ಮಂದಿ ಮೃತಪಟ್ಟಿರುವ ಉದಾಹರಣೆಗಳೂ ಇದ್ದವೆ ಎಂದು ಸ್ಥಳೀಯರು ಹೇಳುತ್ತಾರೆ. ರೋಗಿಗಳನ್ನು ಹೊತ್ತುಕೊಂಡೇ ಸಾಗಿಸಬೇಕಾದ ಪರಿಸ್ಥಿತಿ ಇಲ್ಲಿನ ಜನರ ನಿತ್ಯದ ಸಮಸ್ಯೆಯಾಗಿದೆ.

ಈ ನಡುವೆ ದೇವಸ್ಯ–ನೀರೋಳ್ಯ–ಕಡಂದೇಳು ಸಂಪರ್ಕಿಸುವ ಸುಮಾರು 2 ಕಿಲೋಮೀಟರ್ ರಸ್ತೆಯನ್ನು ಕಾಲನಿ ನಿವಾಸಿಗಳು ತಮ್ಮ ಸ್ವಂತ ಹಣದಿಂದ ದುರಸ್ತಿ ಮಾಡಿದ್ದಾರೆ. ಈ ಕಾರ್ಯಕ್ಕೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಸಹ ಕೈಜೋಡಿಸಿದ್ದು, ಆಟೋ ಸಂಚಾರಕ್ಕೆ ಅನುಕೂಲವಾಗುವಷ್ಟು ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ಕಿರು ಸೇತುವೆ ನಿರ್ಮಿಸಲು ಸಾಧ್ಯವಾಗದ ಕಾರಣ ತೋಡಿಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಈ ಮಣ್ಣು ನೀರಿನೊಂದಿಗೆ ಕೊಚ್ಚಿ ಹೋಗುವ ಆತಂಕವೂ ವ್ಯಕ್ತವಾಗಿದೆ.
ಮಳೆಗಾಲದ ಮೊದಲು ಕಿರು ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಸದ್ಯದಲ್ಲೇ ಸೇತುವೆ ನಿರ್ಮಿಸದಿದ್ದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.

ಇನ್ನು ನೀರೋಳ್ಯ ಭಾಗದಲ್ಲಿ ರಸ್ತೆ ಸಮಸ್ಯೆ ಇರುವುದನ್ನು ಪಾಣಾಜೆ ಗ್ರಾಮ ಪಂಚಾಯತ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕಿರು ಸೇತುವೆ ನಿರ್ಮಾಣಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಅವರು ಅನುದಾನ ಮೀಸಲಿಟ್ಟಿದ್ದು, ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪಾಣಾಜೆ ಗ್ರಾಮ ಪಂಚಾಯತ್ ಪಿಡಿಒ ಆಶಾ ತಿಳಿಸಿದ್ದಾರೆ. ಜೊತೆಗೆ 16ನೇ ಹಣಕಾಸು ಯೋಜನೆಯಡಿ ರಸ್ತೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ, ಸುಮಾರು 80 ವರ್ಷಗಳಿಂದ ರಸ್ತೆ ಮತ್ತು ಸೇತುವೆ ಸೌಕರ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ನೀರೋಳ್ಯ ನಿವಾಸಿಗಳ ಸಮಸ್ಯೆಗೆ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *