ಪುತ್ತೂರಿನ ರೈಲು ನಿಲ್ದಾಣ ಸಮೀಪದ ಲಕ್ಷ್ಮೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೀನ ಸಂಕ್ರಮಣದಂದು ಇಂದು ಮುಂಜಾನೆ ಅಪೂರ್ವ ದೃಶ್ಯ ಕಂಡುಬಂತು. ಸೂರ್ಯನ ಕಿರಣಗಳು ದೇವಸ್ಥಾನದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಸಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಸ್ಪರ್ಶಿಸಿದವು.

ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಈ ಅಪೂರ್ವ ಕ್ಷಣಕ್ಕೆ ಕ್ಷೇತ್ರ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದ ವೇಳೆ ವೈದಿಕರಿಂದ ವೇದಘೋಷ, ಮಂತ್ರೋಚ್ಚಾರಣೆಗಳು ಮೊಳಗಿದರೆ, ಮಹಿಳೆಯರಿಂದ ಭಜನಾ ಸಂಕೀರ್ತನೆ ನಡೆಯಿತು. ನೂರಾರು ಭಕ್ತರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.





ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಮಹತ್ವದ ಘಟ್ಟವೆಂದು ಪರಿಗಣಿಸಲಾಗುತ್ತದೆ. ಈ ದಿನ ಮುಂಜಾನೆಯ ವೇಳೆ ಸೂರ್ಯನ ಕಿರಣಗಳು ನೇರವಾಗಿ ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ಬಿಂಬಕ್ಕೆ ಸ್ಪರ್ಶಿಸುವುದು ವಿಶೇಷತೆ. ಇಂತಹ ಅಪೂರ್ವ ಘಟನೆಯು ನಡೆಯುವ ರಾಜ್ಯದ ಏಕೈಕ ದೇವಸ್ಥಾನವೆಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ.
ಇದಕ್ಕೆ ಹೋಲಿಕೆಯಾಗಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆ ವೇಳೆ ಸೂರ್ಯರಶ್ಮಿ ದೇವರ ಬಿಂಬವನ್ನು ಸ್ಪರ್ಶಿಸುವುದು ಪ್ರಸಿದ್ಧವಾಗಿದೆ.
ಈ ಸಂದರ್ಭದಲ್ಲಿ ದೇವಾಲಯದ ಪ್ರಮುಖರಾದ ಜನಾರ್ಧನ ಬೆಟ್ಟ, ಕೃಷ್ಣ ಪ್ರಸಾದ್ ಬೆಟ್ಟ, ಲಕ್ಷ್ಮೀ ಪ್ರಸಾದ್ ಬೆಟ್ಟ, ಲಕ್ಷ್ಮೀ ಅರ್ಪಣ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಸೇರಿದಂತೆ ಅನೇಕರು ದೇವರ ಪುಣ್ಯಕಾರ್ಯದಲ್ಲಿ ಭಾಗವಹಿಸಿದರು.



