ಪುತ್ತೂರು: 2018ರಲ್ಲಿ ಸಂಪ್ಯದಲ್ಲಿ ಚರಣ್ ರಾಜ್ ರೈ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನಿಸಿದ್ದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಮಹೇಶ್ ಕಜೆ (ಖ್ಯಾತ ವಕೀಲರು)





ಆರ್ಯಾಪು ಗ್ರಾಮದ ಶಾಂತರತ್ನಾ ಕಾಂಪ್ಲೆಕ್ಸ್ ನಿವಾಸಿ ಬಾಲಕೃಷ್ಣ ರೈ ಅವರ ಪುತ್ರ ಚರಣ್ ರಾಜ್ ರೈ (25) ಅವರು ಪುತ್ತೂರಿನ ದರ್ಜೆಯಲ್ಲಿ “ಮಾತೃಛಾಯಾ ಚಿಟ್ಸ್ ಪ್ರೈ.ಲಿ.” ಸಂಸ್ಥೆ ನಡೆಸುತ್ತಿದ್ದರು. 2018ರ ಜನವರಿ 8ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪರಿಚಯದ ಕಿಶೋರ್ ಪೂಜಾರಿ, ಪ್ರೀತಂ ಶೆಟ್ಟಿ, ಧನಂಜಯ ಶೆಟ್ಟಿ, ಮನೀಶ್ ಕುಮಾರ್, ಸುಜಿತ್, ರಾಕೇಶ್, ಕಾರ್ತಿಕ್ ಸುವರ್ಣ ಸೇರಿದಂತೆ ಇತರರು ಅವರನ್ನು ತಡೆದು ಬಾಟಲ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.


ಹಣಪಾವತಿ ವಿಚಾರದಲ್ಲಿ ಉಂಟಾದ ದ್ವೇಷದಿಂದ ಆರೋಪಿಗಳು ಅಕ್ರಮ ಕೂಟ ಸೇರಿ ದಾಳಿ ನಡೆಸಿದ್ದರು ಎಂದು ಚರಣ್ ರಾಜ್ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಐಪಿಸಿ ಕಲಂ 143, 147, 148, 341, 323, 324, 506, 307, 149ರಡಿ ಪ್ರಕರಣ ದಾಖಲಿಸಿದ್ದರು.
ಘಟನೆ ಬಳಿಕ ಕಾರ್ತಿಕ್ ಸುವರ್ಣ ಕೊಲೆಯಾದ ಹಿನ್ನೆಲೆ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಉಳಿದ ಆರು ಮಂದಿಯ ವಿರುದ್ಧ ವಿಚಾರಣೆ ಮುಂದುವರಿದಿತ್ತು.
ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಸರಿತಾ ಡಿ. ಅವರು ಮಾರ್ಚ್ 25ರಂದು ತೀರ್ಪು ನೀಡಿ, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಿದರು. ಆರೋಪಿಗಳ ಪರ ವಕೀಲ ಮಹೇಶ್ ಕಜೆ ವಾದ ಮಂಡಿಸಿದ್ದರು.
ಇದರಿಂದಾಗಿ, ಈ ಕೊಲೆ ಯತ್ನ ಪ್ರಕರಣದ ಆರೋಪಿಗಳು ಇದೀಗ ನ್ಯಾಯಾಲಯದಿಂದ ವಿಮುಕ್ತಿ ಪಡೆದಿದ್ದಾರೆ.


